ಹೆಬ್ಬಾಲೆ, ನ. ೫ : ಸಮೀಪದ ಹೆಬ್ಬಾಲೆ ಕಾವೇರಿ ನದಿ ದಂಡೆಯಲ್ಲಿ ಮಣ್ಣು ಹಾಕಿ ತಡೆಗೋಡೆ ನಿರ್ಮಿಸುತ್ತಿದ್ದ ಸಂದರ್ಭ ಮಣ್ಣು ಜಾರಿ ಜೆಸಿಬಿ ಕಾವೇರಿ ನದಿಗೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಹೆಬ್ಬಾಲೆಯಲ್ಲಿ ನಡೆದಿದೆ.
ಜೆಸಿಬಿ ಚಾಲಕ ದುರ್ಗಾ ಎಂಬಾತ ಪಾರಾದ ವ್ಯಕ್ತಿ. ಈತ ಜೆಸಿಬಿಯಿಂದ ಸೇತುವೆ ಬಲಭಾಗದಲ್ಲಿ ಮಣ್ಣು ಕುಸಿಯದಂತೆ ತqಗೋಡೆ ನಿರ್ಮಿಸಲು ಮಣ್ಣು ಹಾಗೂ ಕಲ್ಲುಗಳನ್ನು ಹಾಕುತ್ತಿರುವ ವೇಳೆ ಮಣ್ಣು ಕುಸಿದು ಜೆಸಿಬಿ ನದಿಗೆ ಉರುಳಿದೆ. ಪಿರಿಯಾಪಟ್ಟಣ ಹಾಗೂ ಸೋಮವಾರಪೇಟೆ ತಾಲೂಕು ಗಡಿಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಕಾವೇರಿ ನದಿಗೆ ಸೇತುವೆ ನಿರ್ಮಿಸ ಲಾಗಿದೆ. ಕಳೆದ ಮೂರು ದಶಕಗಳ ಹಿಂದೆ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣಗೊಂಡ ಈ ಸೇತುವೆ ಈಗ ಶಿಥಿಲಾವಸ್ಥೆಯಲ್ಲಿದೆ. ಸೇತುವೆ ಮೇಲಿನ ರಸ್ತೆ ಡಾಂಬರೀಕರಣ ಸಂಪೂರ್ಣ ಕಿತ್ತು ಹೋಗಿ ಗುಂಡಿಗಳು ನಿರ್ಮಾಣ ಗೊಂಡಿದ್ದು, ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚಾರಿಸ ಬೇಕಾದ ದುಸ್ಥಿತಿ ಇದೆ. ಆದರೆ ಇದುವರೆಗೂ ಈ ಸೇತುವೆಯ ದುರಸ್ತಿಗೆ ಇಲಾಖೆ ಯಾವದೇ ಕ್ರಮಕೈಗೊಂಡಿಲ್ಲ. ಹೆಬ್ಬಾಲೆ ಕ್ಷೇತ್ರದ ಜಿ.ಪಂ. ಸದಸ್ಯ ಎಚ್.ಆರ್. ಶ್ರೀನಿವಾಸ್ ಅವರು ಸೇತುವೆ ಬಲಭಾಗಕ್ಕೆ ಮಣ್ಣು ಹಾಗೂ ಕಲ್ಲುಗಳನ್ನು ಹಾಕಿಸುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ.