ಮಡಿಕೇರಿ, ಅ. ೩: ರಾಜ್ಯ ಸರಕಾರಿ ದಿನಗೂಲಿ ನೌಕರರ ಮಹಾಮಂಡಲದ ರಾಜ್ಯಾಧ್ಯಕ್ಷ ಡಾ. ಕೆ.ಎಸ್. ಶರ್ಮಾ ನೇತೃತ್ವದಲ್ಲಿ ಎಲ್ಲಾ ಇಲಾಖೆಗಳು, ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಈ ನೌಕರರನ್ನೇ ಅವರು ಕೆಲಸ ಮಾಡುತ್ತಿರುವ ಹುದ್ದೆಗಳಲ್ಲಿ ಖಾಯಂ ಮಾಡಬೇಕೆಂದು ಮಹಾಮಂಡಲದ ಮೈಸೂರು ಪ್ರಾಂತ್ಯದ ಸಂಚಾಲಕ ಜಿ. ರಮೇಶ್ ಹೇಳಿದರು.
ಮಡಿಕೇರಿಯ ಬಾಲಭವನದಲ್ಲಿ ಸಮಾವೇಶಗೊಂದಿದ್ದ ಕೊಡಗು ಜಿಲ್ಲೆಯ ವಿವಿಧ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರನ್ನು ಉದ್ದೇಶಿಸಿ ಮಾತನಾಡುತ್ತಾ, ಮೇಲಿನಂತೆ ಹೇಳಿದರು.
ಈ ಸಭೆಯನ್ನು ಉದ್ದೇಶಿಸಿ ಮಹಾಮಂಡಲದ ಜಿಲ್ಲೆಯ ಅಧ್ಯಕ್ಷ ಜಗದೀಶ್, ಹಾಸನ ಜಿಲ್ಲೆಯ ಅಧ್ಯಕ್ಷ ರಂಗೇಗೌಡ, ಚಾಮರಾಜನಗರದ ಜಿಲ್ಲಾ ಘಕಟದ ಕಾರ್ಯದರ್ಶಿ ಸಿ. ರಾಜಣ್ಣ ಮಾತನಾಡಿದರು.
ಮೈಸೂರು ಜಿಲ್ಲಾ ಹೊರಗುತ್ತಿಗೆ ಚಾಲಕರ ಸಂಘಟನೆಯ ಅಧ್ಯಕ್ಷ ಗಂಗಾಧರ ಮಾತನಾಡಿ, ಈಗಾಗಲೇ ಹೊರಗುತ್ತಿಗೆ ನೌಕರರು ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರಗಳಲ್ಲಿ ಮಹಾಮಂಡಲದ ಆಶ್ರಯದಲ್ಲಿ ಸಂಘಟಿತರಾಗಿದ್ದು, ಇಂದು ಕೊಡಗು ಜಿಲ್ಲೆಯ ಹೊರ ಗುತ್ತಿಗೆ ನೌಕರರೂ ಮಹಾಮಂಡಲದ ವ್ಯಾಪ್ತಿಗೆ ಬಂದಿರುವದು ಸಂತಸವನ್ನು ತಂದಿದೆ ಎಂದರು.
ಈ ಸಭೆಯಲ್ಲಿ ಮೈಸೂರು ಸಂಘದ ಉಪಾಧ್ಯಕ್ಷ ಮೊಹಿಸಿನ್ ಪಾಷಾ, ಖಜಾಂಚಿ ಪ್ರಕಾಶ್ ಕೆ.ಜೆ., ಸಂಘಟನಾ ಕಾರ್ಯದರ್ಶಿ ರಘು ಹಾಗೂ ಮುರುಗೇಶ್ ಉಪಸ್ಥಿತರಿದ್ದರು.
ಕೊಡಗು ಜಿಲ್ಲೆಯ ಹೊರಗುತ್ತಿಗೆ ನೌಕರರ ಘಟಕದ ಜಿಲ್ಲಾಧ್ಯಕ್ಷರಾಗಿ ನವೀನ್ ಎಂ.ಜಿ., ಉಪಾಧ್ಯಕ್ಷರಾಗಿ ಸಿ.ಎಂ. ಮನೋಜ್, ಗೌರವಾಧ್ಯಕ್ಷರಾಗಿ ಮಮತ, ಖಜಾಂಚಿಯಾಗಿ ಭವ್ಯ, ಕಾರ್ಯದರ್ಶಿಯಾಗಿ ಶಿವಪ್ಪ ಬಿ.ಬಿ. ಹಾಗೂ ಸಂಘಟನಾ ಕಾರ್ಯದರ್ಶಿ ಯಾಗಿ ರಂಜಿತ್ ಕೆ.ಸಿ. ಆಯ್ಕೆಗೊಂಡರು.