ಕುಶಾಲನಗರ, ನ. ೩: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ೮೫ ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯ ನೆಪವೊಡ್ಡಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸುವ ಮೂಲಕ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಮತ್ತು ಭಾರತೀಯ ರಿಪಬ್ಲಿಕ್ ಪಾರ್ಟಿ ಪ್ರಮುಖರು ಖಂಡನೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ಎಸ್ ಜಿಲ್ಲಾ ಸಂಚಾಲಕ ಕೆ.ಬಿ.ರಾಜು, ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯ ಕಾರಣ ನೀಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಕಾಲೇಜಿಗೆ ತೆರಳಿ ವಿಚಾರಿಸಿದರೂ ಪ್ರಾಂಶು ಪಾಲರು ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಪೋಷಕರ ಸಭೆ ನಡೆಸದೆ, ಯಾವದೇ ರೀತಿಯ ಪೂರ್ವ ಮಾಹಿತಿ ನೀಡದೆ ಪರೀಕ್ಷೆ ಬರೆಯಲು ಏಕಾಏಕಿ ತಡೆಯೊಡ್ಡಲಾಗಿದೆ.
ಈ ವರ್ಷ ಕೆಲವು ವಿದ್ಯಾರ್ಥಿಗಳು ಮಳೆಯ ಹಿನ್ನೆಲೆ ತರಗತಿಗೆ ಸರಿಯಾಗಿ ಹಾಜರಾಗಲು ಸಾಧ್ಯವಾಗಿಲ್ಲ. ಸಮಸ್ಯೆಯನ್ನು ಅರಿತು ಕೂಡಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ಕಲ್ಪಿಸಬೇಕು. ತಪ್ಪಿದಲ್ಲಿ ವಿದ್ಯಾರ್ಥಿಗಳ ಪೋಷಕರ ಸಹಕಾರ ದೊಂದಿಗೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವದು ಎಂದು ಕೆ.ಬಿ.ರಾಜು ಎಚ್ಚರಿಸಿದ್ದಾರೆ.
ಪೋಷಕ ಅಬೂಬಕರ್ ಮಾತನಾಡಿ, ಈಗಾಗಲೆ ಒಂದು ಪರೀಕ್ಷೆ ಬರೆಯುವ ಅವಕಾಶವನ್ನು ವಿದ್ಯಾರ್ಥಿಗಳು ಕಳೆದುಕೊಂಡಿದ್ದಾರೆ. ಮುಂದಿನ ಪರೀಕ್ಷೆ ದಿನಾಂಕದ ಒಳಗಾಗಿ ಅವಕಾಶ ನೀಡದೆ ಹೋದರೆ ಪೋಷಕರು ಪ್ರತಿಭಟನೆ ನಡೆಸಬೇಕಾ ಗುತ್ತದೆ ಎಂದರು.
ಆರ್ಪಿಐ ಪಕ್ಷದ ಜಿಲ್ಲಾಧ್ಯಕ್ಷ ಪುಟ್ಟರಾಜು ಮಾತನಾಡಿ, ಮುಂದಿನ ಮೂರು ದಿನಗಳ ಒಳಗಾಗಿ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಡಿಎಸ್ಎಸ್ನ ಹೋಬಳಿ ಅಧ್ಯಕ್ಷ ಕೀರ್ತಿರಾಜು, ಆರ್ಪಿಐ ಪಕ್ಷದ ತಾಲೂಕು ಅಧ್ಯಕ್ಷ ಚೇತನ್, ಪೋಷಕರಾದ ಅಶ್ರಫ್, ಜಯರಾಂ ಇದ್ದರು.