ಮಡಿಕೇರಿ, ನ. ೨: ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮತ್ತು ಸಾರ್ವಜನಿಕರ ನಡುವೆ ಚರ್ಚೆಗೆ ಅವಕಾಶವನ್ನು ಒದಗಿಸದೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ (ಆರ್‌ಸಿಇಪಿ) ಕ್ಕೆ ಸಹಿ ಹಾಕಲು ಮುಂದಾದಲ್ಲಿ ದೇಶದ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಒಳಗಾಗಲಿದೆಯೆಂದು ಕೊಡಗು ಜಿಲ್ಲಾ ಕಾಂಗ್ರೆಸ್‌ನ ಕಿಸಾನ್ ಮತ್ತು ಮಜ್ದೂರ್ ಘಟಕ ಆತಂಕ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಅಧ್ಯಕ್ಷ ನೆರವಂಡ ಉಮೇಶ್ ಅವರು, ಕೇಂದ್ರ ಸರ್ಕಾರ ಅತ್ಯಂತ ಗೌಪ್ಯವಾಗಿ ೧೬ ದೇಶಗಳನ್ನು ಒಳಗೊಂಡ ಆರ್‌ಸಿಇಪಿ ಯೋಜನೆಗೆ ನ.೪ ರಂದು ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಅಂಕಿತವನ್ನು ಹಾಕಲಿದೆ. ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಂಸತ್‌ನಲ್ಲಾಗಲಿ ಸಾರ್ವಜನಿಕರ ನಡುವಿನ ಚರ್ಚೆಗಾಗಲಿ ಅವಕಾಶ ನೀಡದೆ ಸರ್ಕಾರ ಈಗಾಗಲೆ ೨೫ ಬಾರಿ ಸಭೆಗಳನ್ನು ನಡೆಸಿರುವದು ಹಲವಾರು ಸಂಶಯಗಳಿಗೆ ಎಡೆಮಾಡಿದೆ ಎಂದು ಟೀಕಿಸಿದರು.

ಪ್ರಸ್ತುತ ಕೃಷಿಕ ತಾನು ಬೆಳೆದ ಫಸಲಿಗೆ ಸೂಕ್ತ ಧಾರಣೆ ಇಲ್ಲದೆ ಹಾಗೂ ಅತಿವೃಷ್ಟಿ ಮತ್ತು ಅನಾವೃಷ್ಟಿ ಗಳಿಗೆ ಸಿಲುಕಿ ಕಂಗಾಲಾಗಿದ್ದಾನೆ. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆ ಆರ್‌ಸಿಇಪಿಗೆ ಒಪ್ಪಿಗೆ ಸೂಚಿಸಿದಲ್ಲಿ ದೇಶದಲ್ಲಿ ರೈತರ ಆತ್ಮಹತ್ಯೆ ಸರಣಿ ಆರಂಭವಾಗಲಿದೆಯೆAದು ಆತಂಕ ವ್ಯಕ್ತಪಡಿಸಿದರು.

ಈಗಾಗಲೆ ವಿಯೆಟ್ನಾಂನಿAದ ಕರಿಮೆಣಸು ಆಮದಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನ ಕರಿಮೆಣಸು ಧಾರಣೆ ೨೮೦ ರೂ.ಗಳ ಪಾತಾಳಕ್ಕೆ ಕುಸಿದು, ಕರಿಮೆಣಸು ಖರೀದಿಸುವವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಮುಂದಿನ ದಿನಗಳಲ್ಲಿ ಯೋಜನೆ ಜಾರಿಯಾದಲ್ಲಿ ಆಮದು ತೆರಿಗೆ ಇಲ್ಲದೆಯೇ ದೇಶದೊಳಗೆ ಕೃಷಿ, ಹೈನುಗಾರಿಕೆ, ತೋಟಗಾರಿಕೆ ಸೇರಿದಂತೆ ವಿವಿಧ ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ದೇಶದೊಳಗೆ ಆಮದಾಗಲಿದ್ದು, ಇದರಿಂದಾಗಿ ದೇಶದ ರೈತರ ಉತ್ಪನ್ನಗಳಿಗೆ ಬೇಡಿಕೆ ಇಲ್ಲದೆ ರೈತರು ತಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನ ಒಂದು ಅಧ್ಯಯನದ ಪ್ರಕಾರ ರಾಜ್ಯದಲ್ಲಿ ಸುಮಾರು ೧.೮ ಕೋಟಿ ಮಂದಿ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದೊಮ್ಮೆ ಆರ್‌ಸಿಇಪಿ ಒಪ್ಪಂದದ ಅನ್ವಯ ಹೈನುಗಾರಿಕೆ ಉತ್ಪನ್ನಗಳು ಮುಕ್ತವಾಗಿ ದೇಶವನ್ನು ಪ್ರವೇಶಿಸಿದರೆ, ಬ್ರ‍್ರೆಜಿಲ್, ಆಸ್ಟೆçÃಲಿಯಾಗಳಿಂದ ಆಮದಾಗುವ ಒಂದು ಲೀಟರ್ ಹಾಲು ಕೇವಲ ೧೭ ರೂ.ಗಳಿಗೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇದರಿಂದ ಇಲ್ಲಿನ ಹೈನುಗಾರಿಕಾ ಕ್ಷೇತ್ರ ಸಂಪೂರ್ಣ ನಾಶವಾಗುವ ಅಪಾಯವಿದೆ ಎಂದು ತಿಳಿಸಿ, ಇಂತಹ ಅಪಾಯಕಾರಿ ಒಪ್ಪಂದಕ್ಕೆ ಸಹಿ ಹಾಕಲು ಭಾರೀ ಒತ್ತಡವಿದ್ದರೂ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಮ್ಮತಿಯನ್ನು ನೀಡಿರಲಿಲ್ಲ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಸಹಕಾರಿ ಸಂಸ್ಥೆಗಳನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರಲು ಮುಂದಾಗಿದ್ದು, ವಾರ್ಷಿಕವಾಗಿ ಒಂದು ಕೋಟಿ ವ್ಯವಹಾರ ನಡೆಸುವ ಸಹಕಾರಿ ಸಂಸ್ಥೆಗಳು ಶೇ.೨ ರಷ್ಟು ತೆರಿಗೆಯನ್ನು ಪಾವತಿಸಬೇಕೆಂದು ಸೂಚಿಸಿದೆ. ಈಗಾಗಲೆ ಸಹಕಾರ ಸಂಘಗಳು ಜಿಎಸ್‌ಟಿಯನ್ನು ಪಾವತಿಸುತ್ತಿದ್ದು, ತೆರಿಗೆಯನ್ನು ಪಾವತಿಸುವದಿದ್ದಲ್ಲಿ ಅದನ್ನು ಸಂಘದ ಸದಸ್ಯರ ಮೂಲಕವಷ್ಟೆ ಪಾವತಿಸಬೇಕಾಗುತ್ತದೆ. ಇದರಿಂದ ಸಹಕಾರಿ ಸಂಸ್ಥೆಗಳಿಗೆ ದೊಡ್ಡ ಹೊಡೆತ ಬೀಳಲಿದೆಯೆಂದು ಆತಂಕ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಮಾತನಾಡಿ, ಈಗಾಗಲೆ ಯಾವದೇ ಒಪ್ಪಂದವಿಲ್ಲದೆ ರೇಷ್ಮೆ, ಕರಿಮೆಣಸು ಚೀನ ಮತ್ತು ವಿಯೆಟ್ನಾಂನಿAದ ಆಮದಾಗುತ್ತಿದ್ದು, ಇದರಿಂದಾಗಿ ಈಗಾಗಲೆ ಈ ಉತ್ಪನ್ನಗಳಿಗೆ ಬೆಲೆ ದೊರಕದಂತಾಗಿದೆ. ಮುಂದಿನ ದಿನಗಳಲ್ಲಿ ಯೋಜನೆ ಜಾರಿಯಾದಲ್ಲಿ ೧೫ ವರ್ಷಗಳ ಕಾಲ ಆಮದು ತೆರಿಗೆ ಇಲ್ಲದೆಯೇ ಹಲವಾರು ಉತ್ಪನ್ನಗಳು ದೇಶದೊಳಗೆ ಮುಕ್ತವಾಗಿ ಆಮದಾಗಲಿದ್ದು, ಇದರಿಂದಾಗಿ ಕೃಷಿ ಹಾಗೂ ಅದರ ಉಪ ವೃತ್ತಿಗಳಲ್ಲಿ ತೊಡಗಿಸಿಕೊಂಡವರ ಬದುಕು ನಿರ್ನಾಮವಾಗಲಿದೆಯೆಂದು ಆತಂಕ ವ್ಯಕ್ತಪಡಿಸಿದರು. ಈ ಯೋಜನೆಯನ್ನು ವಿರೋಧಿಸಿ ನ. ೪ ರಿಂದ ೧೫ ರವರೆÀಗೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಎಐಸಿಸಿ ಈಗಾಗಲೆ ಕರೆ ನೀಡಿದ್ದು, ಅದರ ಅನ್ವಯ ಕೊಡಗು ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲಾಗುತ್ತದೆ. ಈ ಸಂಬAಧ ತಾ. ೬ ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವದು ಎಂದರು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್ ಮಾತನಾಡಿ, ತಾ. ೧೧ ರಿಂದ ೧೪ರವರೆಗೆ ಭಾಗಮಂಡಲ, ಸಂಪಾಜೆ ಹಾಗೂ ನಾಪೋಕ್ಲು ಹೋಬಳಿಗಳಲ್ಲಿ ಪಕ್ಷದ ವತಿಯಿಂದ ವಿಷಯಕ್ಕೆ ಸಂಬAಧಿಸಿದAತೆ ಜನಾಂದೋಲನ ನಡೆಸಲಾಗುವದು ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್ ಹಾಗೂ ಮಡಿಕೇರಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.