ನಾಪೋಕ್ಲು, ನ. ೨: ಪಟ್ಟಣದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಹೇಳಿದರು. ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಮಾಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮಸ್ಥರಾದ ಬಿ.ಎಂ.ಪ್ರತೀಪ್ ಪಟ್ಟಣ ಅಶುಚಿತ್ವದಿಂದ ಕೂಡಿದೆ. ಅಲ್ಲಲ್ಲಿ ಚರಂಡಿಗಳು ಮುಚ್ಚಿಹೋಗಿದೆ. ಕೂಡಲೇ ಇದರ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಇಸ್ಮಾಯಿಲ್ ಹಳೇ ತಾಲೂಕಿನಿಂದ ಮಾರುಕಟ್ಟೆ ಹಾಗೂ ಬೇತು ಗ್ರಾಮದ ಮಕ್ಕಿ ದೇವಳ ರಸ್ತೆಯವರೆಗೆ ಹಂತ ಹಂತವಾಗಿ ಚರಂಡಿ ದುರಸ್ತಿ ನಡೆಸಲು ಕ್ರಮಕೈಗೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿ ಕಾಮಗಾರಿ ನಡೆಸುವದರ ಮೂಲಕ ಪಟ್ಟಣವನ್ನು ಶುಚಿಗೊಳಿಸಲಾಗುವದು ಎಂದು ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಸದಸ್ಯರಾದ ಮಾಚೆಟ್ಟಿರ ಕುಶು ಕುಶಾಲಪ್ಪ, ಚೋಕಿರ ರೋಶನ್, ಶಿವಚಾಳಿಯಂಡ ಜಗದೀಶ್, ಕುಲ್ಲೇಟಿರ ಜ್ಯೋತಿ ನಾಚಪ್ಪ, ಚೀಯಕಪೂವಂಡ ಮುತ್ತುರಾಣಿ ಅಚ್ಚಪ್ಪ, ಸುಶೀಲಮ್ಮ, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಲೆಕ್ಕಾಧಿಕಾರಿ ನಂದಿನಿ, ಮತ್ತು ಸಿಬ್ಬಂದಿ ಇದ್ದರು.