ಮಡಿಕೇರಿ, ನ. ೨: ಪ್ರಸಕ್ತ ಸಾಲಿನ ಕಲಾಶ್ರೀ ಆಯ್ಕೆ ಶಿಬಿರವನ್ನು ವಿವಿಧ ಪ್ರಕಾರಗಳಲ್ಲಿ ನಡೆಸುವದರೊಂದಿಗೆ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವದರ ಮೂಲಕ ಅವರಲ್ಲಿ ಆತ್ಮಸ್ಥೆöÊರ್ಯ, ಭರವಸೆ, ದೃಢವಾದ ವ್ಯಕ್ತಿತ್ವ, ವಿಚಾರವಂತಿಕೆ, ಕಲಾಪ್ರತಿಭೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರತಿಭಾವಂತ ಮಕ್ಕಳಿಗೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು.
ಬಾಲಭವನ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರ ಈ ನಾಲ್ಕು ಚಟುವಟಿಕೆಗಳಲ್ಲಿ ಪ್ರತಿ ತಾಲೂಕಿನಿಂದ ತಲಾ ೮ ರಂತೆ ಒಟ್ಟು ೨೪ ಮಕ್ಕಳನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಲಾಗಿದ್ದು, ಮೂರು ತಾಲೂಕಿನಿಂದ ಆಯ್ಕೆಯಾದ ೨೪ ಮಕ್ಕಳಿಗೆ ಜಿಲ್ಲಾಮಟ್ಟದ ಕಲಾಶ್ರೀ ಆಯ್ಕೆ ಶಿಬಿರ ತಾ. ೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಒಟ್ಟು ೨೪ ಮಕ್ಕಳಲ್ಲಿ ೮ ಮಕ್ಕಳನ್ನು ಆಯ್ಕೆ ಮಾಡಿ ರಾಜ್ಯಮಟ್ಟಕ್ಕೆ ಕಳುಹಿಸಿಕೊಡಲಾಗುವದು. ರಾಜ್ಯಮಟ್ಟದಲ್ಲಿ ನಡೆಯುವ ಕಲಾಶ್ರೀ ಉತ್ಸವದಲ್ಲಿ ಪ್ರತಿ ಜಿಲ್ಲೆಯಿಂದ ತಲಾ ೮ ಮಕ್ಕಳಂತೆ ಭಾಗವಹಿಸಲಿದ್ದಾರೆ.
ತಾಲೂಕು ಮಟ್ಟದಲ್ಲಿ ಭಾಗವಹಿಸುವ ಮಕ್ಕಳು ಪೋಷಕರಿಂದ ಅನುಮತಿ ಪತ್ರ, ಓದುತ್ತಿರುವ ಶಾಲೆಯ ಮುಖ್ಯಸ್ಥರಿಂದ ಅನುಮತಿ ಪತ್ರ, ವಯಸ್ಸಿನ ದೃಢೀಕರಣ ಪತ್ರ, ವ್ಯಾಸಂಗ ದೃಢೀಕರಣ ಪತ್ರ, ಪೋಷಕರಿಂದ ಒಪ್ಪಿಗೆ ಪತ್ರ, ೪ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.