ಮಡಿಕೇರಿ, ನ. 1: ಮಳೆಗಾಲದ ಪ್ರವಾಹದೊಂದಿಗೆ ಬದುಕಿನಲ್ಲಿ ಎದುರಾಗಲಿರುವ ಯಾವದೇ ಪರಿಸ್ಥಿತಿಯಲ್ಲಿಯೂ; ಧೃತಿಗೆಡದೆ ಆತ್ಮಸ್ಥೈರ್ಯದಿಂದ ಸನ್ನಿವೇಶವನ್ನು ಎದುರಿಸುವದು ಕನ್ನಡಿಗರ ಗಟ್ಟಿತನಕ್ಕೆ ಉದಾಹರಣೆಯಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಬಣ್ಣಿಸಿದ್ದಾರೆ. ಮಡಿಕೇರಿಯ ಕೋಟೆ ಆವರಣದಲ್ಲಿ 64ನೇ ಕನ್ನಡ ರಾಜ್ಯೋತ್ಸವದ ಸಂದರ್ಭ; ರಾಷ್ಟ್ರಧ್ವಜಾರೋಹಣಗೊಳಿಸಿ ಅವರು ಈ ಸಂದೇಶ ನೀಡಿದರು.ಒಂದೊಮ್ಮೆ ಹರಿದು ಹಂಚಿಹೋಗಿದ್ದ ಕರುನಾಡನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ ಹಿರಿಯರನ್ನು ಸ್ಮರಿಸಿಕೊಂಡ ಜಿಲ್ಲಾಧಿಕಾರಿ; ಸರ್ವ ಜನಾಂಗದೊಳು ಸಾಮರಸ್ಯ, ಶಾಂತಿ, ಪ್ರೀತಿಯ ಇತಿಹಾಸವಿರುವ ಕರುನಾಡಿನ ಏಳಿಗೆಗಾಗಿ ಇನ್ನಷ್ಟು ಒಗ್ಗಟ್ಟಿನಿಂದ ಎಲ್ಲರೂ ಶ್ರಮಿಸುವಂತೆ ಕರೆಯಿತ್ತರು.ಜಿಲ್ಲೆಯ ಸಮಸ್ತ ಜನತೆಗೆ 64ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ

(ಮೊದಲ ಪುಟದಿಂದ) ಶುಭಾಶಯಗಳನ್ನು ಕೋರಿ ಮಾತು ಆರಂಭಿಸಿದ ಜಿಲ್ಲಾಧಿಕಾರಿಗಳು, ಸ್ವಾತಂತ್ರ್ಯ ಪೂರ್ವದಲ್ಲಿ ವಿವಿಧ ಕಾರಣಗಳಿಂದ ಹರಿದು ಹಂಚಿಹೋಗಿದ್ದ ಪ್ರದೇಶಗಳನ್ನು ಭಾಷಾ ಪುನರ್ವಿಂಗಡಣೆಯ ಆಧಾರದ ಮೇಲೆ; ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ 1956 ನವೆಂಬರ್ 1 ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು ಎಂದು ನೆನಪಿಸಿದರು.ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರಿರುವ ಪ್ರದೇಶಗಳನ್ನು ಒಟ್ಟುಗೂಡಿಸುವಲ್ಲಿ ಇದು ತಕ್ಕಮಟ್ಟಿಗೆ ಯಶಸ್ವಿಯೂ ಆಯಿತು ಎಂದು ಬೊಟ್ಟು ಮಾಡಿದ ಅವರು, 1956ರಲ್ಲಿ ಮೈಸೂರು ರಾಜ್ಯ ಉದಯಗೊಂಡರೂ ಕನ್ನಡದ ಕವಿಗಳಾದ ಕುವೆಂಪು, ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ.ಎಂ. ಶ್ರೀಕಂಠಯ್ಯ ಮುಂತಾದವರು ‘ಕರ್ನಾಟಕ’ ಎಂಬ ಹೆಸರನ್ನು ಕನ್ನಡ ನಾಡಿಗೆ ಕೊಡಬೇಕೆಂದು ಹೇಳಿದ್ದಾಗಿ ನೆನಪಿಸುತ್ತಾ; ಅಂದಿನ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸು ಅವರು 1973ರ ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ ರಾಜ್ಯ’ ಎಂದು ನಾಮಕರಣ ಮಾಡಿದ್ದನ್ನು ಉಲ್ಲೇಖಿಸಿದರು.

2 ಸಾವಿರ ವರ್ಷದ ಇತಿಹಾಸ: ಈ ಕನ್ನಡ ನಾಡುನುಡಿಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. 2 ಸಾವಿರ ವರ್ಷಗಳ ಹಿಂದೆಯೇ ಈ ಭಾಷೆಯನ್ನು ಮಾತನಾಡುವ ಜನ ಇದ್ದರು ಎಂಬದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉಲ್ಲೇಖಗಳಿವೆ ಎಂದು ಹೇಳಿದ ಅನೀಸ್ ಕಣ್ಮಣಿ ಜಾಯ್, ಕ್ರಿ.ಶ. 450ರ ಕನ್ನಡ ಭಾಷೆಯ ಮೊಟ್ಟ ಮೊದಲ ಶಾಸನ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದಗಳಿವೆ. ಕ್ರಿ.ಶ. 850ರ ಕನ್ನಡದ ಮೊಟ್ಟ ಮೊದಲ ಗ್ರಂಥ ಕವಿರಾಜಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತಾರದ ಬಗ್ಗೆ ಉಲ್ಲೇಖವಿದೆ ಎಂದರು.

ಈ ನಾಡಿನಲ್ಲಿ ಶೂರರು, ವೀರರು, ತ್ಯಾಗಿಗಳು, ಸ್ವಾಭಿಮಾನಿಗಳು, ಸಜ್ಜನರು, ಶಾಂತಿ ಪ್ರಿಯರು, ವಿದ್ವನ್ಮಣಿಗಳು, ಶ್ರೇಷ್ಠರು, ಚಿಂತಕರು ಜನ್ಮವೆತ್ತಿದ್ದು, ತ್ಯಾಗ, ಭೋಗ, ಅಕ್ಕರೆಯ, ಗೇಯ, ಗೊಟ್ಟಿ ಇತ್ಯಾದಿಗಳಿಗೆ ಕರುನಾಡು ಹೆಸರಾಗಿದೆ ಎಂದು ಬಣ್ಣಿಸಿದರು. ಈ ನಾಡಿನಲ್ಲಿ ಮನುಷ್ಯನಾಗಿ ಅಲ್ಲದಿದ್ದರೂ, ಮರಿದುಂಬಿಯಾಗಿಯಾದರೂ ಹುಟ್ಟಬೇಕೆನ್ನುತ್ತಾನೆ ಕವಿ ಪಂಪ. ಸರ್ವ ಜನಾಂಗದ ಶಾಂತಿಯ ತೋಟವಾದ ಈ ನಾಡು ಹಿಂದೂ, ಕ್ತೈಸ್ತ, ಮುಸಲ್ಮಾನ, ಪಾರಸಿಕ, ಜೈನರ ಉದ್ಯಾನವಾಗಿ ಶಾಂತಿ ಸಾಮರಸ್ಯಕ್ಕೆ, ಐಕ್ಯತೆಗೆ, ಭಾವೈಕ್ಯತೆಗೆ ಹೆಸರಾಗಿದೆ ಎಂದರು.

ಎಲ್ಲರ ಹೊಣೆ : ಇಂತರ ಶ್ರೀಮಂತ ಪರಂಪರೆಯುಳ್ಳ ನಮ್ಮ ನಾಡಿನ ನೆಲ, ಜಲ, ನಾಡು, ನುಡಿ, ಸಂಸ್ಕøತಿ ಪರಂಪರೆಯನ್ನು ರಕ್ಷಿಸುವದು ಕನ್ನಡಿಗರಾದ ನಮ್ಮೆಲ್ಲರ ಹೊಣೆಯಾಗಿದೆ. ಕರುನಾಡ ಜನರ ಮನಸ್ಸಿನಲ್ಲಿ ಕನ್ನಡ ಅಭಿಮಾನದ ಬೀಜವನ್ನು ಬಿತ್ತುವದರ ಮೂಲಕ ಕನ್ನಡ ನಾಡಿನ ಗರಿಮೆಯನ್ನು ಇನ್ನೂ ಉತ್ತುಂಗಕ್ಕೇರಿಸಲು ಎಲ್ಲಾ ಕನ್ನಡಿಗರು ಪ್ರಯತ್ನಿಸಬೇಕಾಗಿದೆ. ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ, ಆದ್ದರಿಂದ ಪ್ರಾದೇಶಿಕ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಕಾರ್ಯ ನಾವು ಮಾಡಬೇಕಾಗಿದೆ ಎಂದು ಅವರು ತಿಳಿ ಹೇಳಿದರು.

ಈ ವರ್ಷ ಕಳೆದ ಮೂರು ತಿಂಗಳುಗಳಿಂದ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು; ಪ್ರವಾಹ ಪರಿಸ್ಥಿತಿ ಉಂಟಾಗಿರುತ್ತದೆ. ಈ ಸಂದರ್ಭದಲ್ಲಿ ಕನ್ನಡಿಗರು ಧೃತಿಗೆಡದೆ ತಮ್ಮ ಆತ್ಮಸ್ಥೈರ್ಯದಿಂದ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಿ, ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವದು ಕನ್ನಡಿಗರ ಗಟ್ಟಿತನಕ್ಕೆ ಉದಾಹರಣೆಯಾಗಿದೆ ಎಂದು ಅವರು ವ್ಯಾಖ್ಯಾನಿಸಿದರು. ಕವಿ ಡಿ.ಎಸ್. ಕರ್ಕಿ ಅವರ ಆಶಯದಂತೆ ಗಡಿನಾಡೇ ಇರಲಿ, ನಡುನಾಡೇ ಇರಲಿ, ಕನ್ನಡದ ಶಾಂತಿಯನ್ನು ಹೆಚ್ಚಿಸಿ ಮನ ಮನಗಳಲ್ಲಿ ಮತ್ತು ಮನೆ ಮನೆಗಳಲ್ಲಿ ಕನ್ನಡದ ದೀಪವನ್ನು ಹಚ್ಚಬೇಕಾಗಿದೆ. ಇದಕ್ಕಾಗಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ. ಅಂತಹ ಶಕ್ತಿಯನ್ನು ಕನ್ನಡಾಂಬೆ, ತಾಯಿ ಭುವನೇಶ್ವರಿ ನಮಗೆ ನೀಡಲೆಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ವಾದ್ಯ ಸಹಿತ ಜಿಲ್ಲಾ ಸಶÀಸ್ತ್ರದಳ, ವಿವಿಧ ಶಾಲಾ - ಕಾಲೇಜುಗಳ ಎನ್‍ಸಿಸಿ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಗೃಹರಕ್ಷಕ ದಳ ತಂಡಗಳ ಆಕರ್ಷಕ ಪಥಸಂಚಲನದೊಂದಿಗೆ ಗೌರವ ರಕ್ಷೆ ನೀಡಲಾಯಿತು. ಮೇಲ್ಮನೆ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ವಿ. ಸ್ನೇಹಾ, ಉಪವಿಭಾಗಾಧಿಕಾರಿ ಟಿ. ಜವರೇಗೌಡ ಸೇರಿದಂತೆ ವಿವಿಧ ಪ್ರಮುಖರು, ಅಧಿಕಾರಿಗಳು ಹಾಜರಿದ್ದರು.

ಸಂತ ಮೈಕಲರ ಶಾಲಾ ವಿದ್ಯಾರ್ಥಿನಿಯರಿಂದ ನಾಡಗೀತೆಯೊಂದಿಗೆ ರೈತಗೀತೆ, ಸಂತಜೋಸೆಫರ ಶಾಲೆ, ಜ. ತಿಮ್ಮಯ್ಯ ಶಾಲೆ, ಸರಕಾರಿ ಶಾಲೆ, ಬ್ಲಾಸಂ ಶಾಲೆ, ಕ್ರೆಸೆಂಟ್ ಶಾಲೆಗಳ ಮಕ್ಕಳಿಂದ ಕರುನಾಡ ವೈಭವದ ನೃತ್ಯ ಕಾರ್ಯಕ್ರಮಗಳು ಮೂಡಿಬಂದವು. ವಿವಿಧ ಕ್ಷೇತ್ರದ ಸಾಧನೆಗಾಗಿ ಚಿಣ್ಣರ ಸಹಿತ ಹಿರಿಯರನ್ನು ಈ ಸಂದರ್ಭ ಗೌರವಿಸಲಾಯಿತು. ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು. ಶಿಕ್ಷಕರುಗಳಾದ ಚೋಕೀರ ಅನಿತಾ ದೇವಯ್ಯ ಹಾಗೂ ವರದರಾಜ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯೋತ್ಸವದೊಂದಿಗೆ ಶಾಲಾ ಮಕ್ಕಳಿಂದ ಜರುಗಿದ ಸಾಂಸ್ಕøತಿಕ ನೃತ್ಯ ಕಾರ್ಯಕ್ರಮಗಳ ಸಹಿತ ಇಂದು ವರುಣನ ಕೃಪೆಯೊಂದಿಗೆ ಕನ್ನಡಾಂಭೆಯ ಹಿರಿಮೆಯ ಸೊಗಡು ಪಸರಿಸುವತ್ತ ಎಲ್ಲರಲ್ಲೂ ಸಡಗರ ಕಾಣುವಂತಾಯಿತು.