ನಾಪೋಕ್ಲು, ನ. ೨: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದ ಸರ್ವೆ ನಂ. ೩೭/೨ರ ನಾಪೋಕ್ಲು ಹೋಬಳಿಗೆ ಒಳಪಟ್ಟ ಹಿಂದೂ ರುದ್ರಭೂಮಿ ಜಾಗದಲ್ಲಿ ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಮಾಡುವ ಉದ್ದೇಶದಿಂದ ೧೦೦ ಅಡಿ ಉದ್ದ, ೨೫ ಅಡಿ ಅಗಲ ಮತ್ತು ೧೦ ಅಡಿ ಆಳದ ಗುಂಡಿ ನಿರ್ಮಿಸಿದೆ. ಅದರಂತೆ ಕೆಲವು ದಿನಗಳಿಂದ ಅಲ್ಲಿ ತ್ಯಾಜ್ಯವನ್ನು ಹಾಕುತ್ತಿದೆ. ಇದು ಬೆಳಕಿಗೆ ಬರುತ್ತಿ ದ್ದಂತೆ ರೊಚ್ಚಿಗೆದ್ದ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ನಂತರ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಶಾಸಕ ಕೆ.ಜಿ.ಬೋಪಯ್ಯ ಭೇಟಿ: ಸ್ಥಳಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸ್ಥಳೀಯ ನಾಡು ಕಚೇರಿಯಲ್ಲಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಅವರು; ಕಾವೇರಿ ನದಿ (ಮೊದಲ ಪುಟದಿಂದ) ತೀರದಿಂದ ೩೦೦ ಮೀ. ದೂರದವರೆಗೆ ಯಾವದೇ ಕೆಲಸ ಮಾಡುವ ಹಾಗಿಲ್ಲ. ಆದರೂ ಈ ಸ್ಥಳವನ್ನು ಹೇಗೆ ಆಯ್ಕೆ ಮಾಡಿದ್ದೀರ ಎಂದು ಕಂದಾಯ ಪರಿವೀಕ್ಷಕ ರಾಮಯ್ಯ ಅವರನ್ನು ಪ್ರಶ್ನಿಸಿದರು. ಇದಕ್ಕೆ ಸರಿಯಾಗಿ ಉತ್ತರ ದೊರೆಯದ ಕಾರಣ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ಪ್ರಸ್ತಾಪಿಸಿ ಕಂದಾಯ ಪರಿವೀಕ್ಷಕರಿಗೆ ಶೋಕಾಶ್ ನೋಟೀಸ್ ನೀಡುವಂತೆ ಸೂಚಿಸಿದರು. ಪಂಚಾಯಿತಿ ಅಧಿಕಾರಿ ಚೋಂದಕ್ಕಿ ಅವರನ್ನು ಈ ಬಗ್ಗೆ ವಿಚಾರಿಸಿದಾಗ, ಈ ಬಗ್ಗೆ ಮಾಹಿತಿ ಇಲ್ಲ. ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿಲ್ಲ. ಹಣವೂ ನೀಡಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಶಾಸಕರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕಾನೂನು ಬಾಹಿರವಾಗಿ ಈ ಕಾರ್ಯ ಮಾಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸ್ಥಳದಲ್ಲಿದ್ದ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಚಯ್ಯ ಅವರಿಗೆ ಸೂಚಿಸಿದರು.
ಮರ ಮಾಯ: ಈ ಸ್ಥಳದಲ್ಲಿ ಒಂದು ಶ್ರೀಗಂಧದ ಮರ, ಐದು ಬೀಟೆ ಮರ, ಐದು ಅಕೇಶಿಯ ಮರ ಇತ್ತು ಅದನ್ನು ಕತ್ತರಿಸಿ ಸಾಗಿಸಲಾಗಿದೆ. ಅರಣ್ಯ ಇಲಾಖೆಯವರು ಶಾಮೀಲಾಗಿದ್ದಾರೆ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಇಲ್ಲಿದ್ದ ೧೬ ಶವಗಳು ಕಾಣೆಯಾಗಿವೆ ಇದನ್ನು ಹುಡುಕಿಕೊಡುವ ಕೆಲಸವನ್ನು ಮಾಡಬೇಕು. ಕಂದಾಯ ಪರಿವೀಕ್ಷಕ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು. ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಒತ್ತಾಯಿಸಿದರು.
ಹೆಣಗಳು ಮಾಯ: ಈ ರುದ್ರ ಭೂಮಿ ಕಳೆದ ೪೦ ವರ್ಷಗಳಿಂದ ಇದೆ. ಇಲ್ಲಿ ಸಾವಿರಾರು ಮೃತ ಶರೀರಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ರುದ್ರಭೂಮಿಯ ಪ್ರವೇಶದಲ್ಲಿ ಮೃತ ಶರೀರವನ್ನು ದಹಿಸುವ ಕಾರ್ಯ ನಡೆಸಿದರೆ, ಹಿಂಭಾಗದಿAದ ಮೃತ ಶರೀರವನ್ನು ಹೂಳುತ್ತಾ ಬರಲಾಗುತ್ತಿದೆ. ಮೃತ ದೇಹಗಳನ್ನು ಹೂತಿರುವ ಸ್ಥಳದಲ್ಲಿ ಗುಂಡಿ ನಿರ್ಮಿಸಿರುವದರಿಂದ ಅಲ್ಲಿದ್ದ ಮೃತ ಶರೀರಗಳು ಕಾಣೆಯಾಗಿವೆ. ಇದನ್ನು ಗ್ರಾಮ ಪಂಚಾಯಿತಿ ಹುಡುಕಿ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಕಳೆದ ವರ್ಷ ಆ. ೬ ರಂದು ಕುಶಾಲನಗರ ಸಮೀಪ ಉಂಟಾದ ಅಪಘಾತದಲ್ಲಿ ಹಾರಂಗಿ ನಾಲೆಗೆ ಬಿದ್ದು ಮೃತಪಟ್ಟ ನಾಲ್ವರು ಮತ್ತು ನಂತರ ಮೃತಪಟ್ಟ ಅವರ ಸಂಬAಧಿ ಸೇರಿದಂತೆ ಐದು ಮೃತ ದೇಹಗಳನ್ನು ಒಂದೇ ಬದಿಯಲ್ಲಿ ಹೂತು ಮಣ್ಣು ಮಾಡಲಾಗಿತ್ತು. ಹಬ್ಬ ಹರಿದಿನಗಳಲ್ಲಿ ಅಲ್ಲಿ ಪೂಜೆ ನಡೆಸಿ, ಎಡೆ ಇಡುತ್ತಿದ್ದೆವು. ಆದರೆ ಈಗ ಆ ಜಾಗವೇ ತಿಳಿಯುತ್ತಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ನಾಪೋಕ್ಲು ಭಜರಂಗದಳದ ಅಧ್ಯಕ್ಷ ಬಿ.ಎಂ. ಪ್ರತೀಪ್ ವಹಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ .ಹರೀಶ್, ಪ್ರಮುಖರಾದ ತಳೂರು ಕಿಶೋರ್ ಕುಮಾರ್, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಪಾಡಿಯಮ್ಮಂಡ ಮನು ಮಹೇಶ್, ಕುಂಡ್ಯೋAಳAಡ ರಮೇಶ್ ಮುದ್ದಯ್ಯ, ಡಿವೈಎಸ್ಪಿ ದಿನೇಶ್ ಕುಮಾರ್ ಮತ್ತಿತರರು ಇದ್ದರು. ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
-ಪಿ.ವಿ. ಪ್ರಭಾಕರ್, ದುಗ್ಗಳ