ಕುಶಾಲನಗರ, ನ. ೨: ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಜಿಲ್ಲಾಮಟ್ಟದ ದೊಡ್ಡ ವೀರ ರಾಜೇಂದ್ರ ಒಡೆಯರ್ ಸ್ಮಾರಕ ಕ್ರೀಡಾಕೂಟ ತಾ. ೧೭ ರಂದು ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಗುಂಪು ಆಟಗಳಾದ ಟೆನ್ನಿಸ್ ಬಾಲ್ ಕ್ರಿಕೆಟ್, ಹಗ್ಗಜಗ್ಗಾಟ, ಥ್ರೋಬಾಲ್, ಶಟಲ್ಸ್, ವೈಯಕ್ತಿಕ ಸ್ಪರ್ಧೆ ವಿಭಾಗದಲ್ಲಿ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಕಾಳು ಹೆಕ್ಕುವದು, ಕಪ್ಪೆ ಕುಪ್ಪಳಿಸುವದು, ೧ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಓಟ, ಸ್ಟಿಕ್ಕರ್ ಅಂಟಿಸುವದು, ಬಲೂನ್ ಒಡೆಯುವದು, ನಿಂಬೆ ಚಮಚ ಓಟ, ಪ್ರೌಢಶಾಲಾ ಮಟ್ಟದವರಿಗೆ ನಿಧಾನ ಸೈಕಲ್ ಚಾಲನೆ, ಪುರುಷ ಮತ್ತು ಮಹಿಳೆಯರಿಗೆ ವೈಯಕ್ತಿಕ ಸ್ಪರ್ಧೆ ವಿಭಾಗದಲ್ಲಿ ನಿಧಾನ ಬೈಕ್ ಚಾಲನೆ, ಭಾರದ ಗುಂಡು ಎಸೆತ, ರಂಗೋಲಿ ಸ್ಪರ್ಧೆ, ವಿಷದ ಚೆಂಡು, ಬಸ್ಸು ಹುಡುಕಾಟ, ಸಂಗೀತ ಕುರ್ಚಿ, ನಡಿಗೆ, ಬಕೆಟ್‌ಗೆ ಚೆಂಡು ಹಾಕುವದು ಮೊದಲಾದ ಸ್ಪರ್ಧೆಗಳು ನಡೆಯಲಿವೆ.

ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ೮ ಗಂಟೆಗೆ ಕೊಪ್ಪ ಗೇಟ್‌ನ ಕಾವೇರಿ ಪ್ರತಿಮೆ ಬಳಿಯಿಂದ ಹೆದ್ದಾರಿ ಮಾರ್ಗವಾಗಿ ಮೈದಾನದ ತನಕ ಪ್ಲಾಸ್ಟಿಕ್ ಮುಕ್ತ ಪಟ್ಟಣದ ಬಗ್ಗೆ ಅರಿವು ಮೂಡಿಸುವ ಅಂಗವಾಗಿ ಬೈಕ್ ಜಾಥಾ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಮಹೇಶ್ ೯೪೮೧೦೫೯೨೨೩, ಪ್ರ.ಕಾ. ಶಾಂಭಶಿವಮೂರ್ತಿ ೯೪೪೮೩೩೬೭೮೧ ಗೆ ಸಂಪರ್ಕಿಸುವAತೆ ಪ್ರಕಟಣೆ ಕೋರಿದೆ.