ಮಡಿಕೇರಿ, ನ. ೨: ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಟಕ್ಕೆ ನುಗ್ಗಿದ ಘಟನೆ ಸಂಭವಿಸಿದೆ.

ಮೈಸೂರುನಿAದ ಮಡಿಕೇರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ (ಕೆಎ ೦೯ ಎಫ್ ೪೭೭೦) ಇಬ್ನಿವಳವಾಡಿ ಗ್ರಾಮದ ಇಳಿಜಾರಿನಲ್ಲಿ ಬರುತ್ತಿದ್ದಾಗ ವೇಗ ಹೆಚ್ಚಾಗಿ ತಿರುವಿನಲ್ಲಿ ರಸ್ತೆಯ ಎಡಬದಿಗೆ ನುಗ್ಗಿದೆ. ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಅಪ್ಪಳಿಸಿದೆ. ಬಸ್ ಅನ್ನು ನಿಯಂತ್ರಣಕ್ಕೆ ತರಲು ಚಾಲಕ ಕೆ.ಎಸ್. ಅಶೋಕ್‌ಕುಮಾರ್ ಅವರು ಬಲಕ್ಕೆ ತಿರುಗಿಸಿದ್ದಾರೆ. ಈ ಸಂದರ್ಭ ಬಸ್‌ನ ಮುಂದೆ ಚಲಿಸುತ್ತಿದ್ದ ಪ್ರವಾಸಿಗರಿದ್ದ ಶೆರ್ವರ್ಲೆ ಟವೇರಾ ವಾಹನಕ್ಕೆ (ಕೆಎ ೫೧ ಸಿ ೦೯೯೫) ಡಿಕ್ಕಿಯಾಗಿದೆ. ನಂತರ ಅದೇ ರಭಸದಲ್ಲಿ ಬಲಬದಿಯ ತೋಟದೊಳಗೆ ನುಗ್ಗಿದೆ. ಸುಮಾರು ೫೦ಕ್ಕೂ ಅಧಿಕ ಅಡಿ ಇಳಿಜಾರಿನಲ್ಲಿ ಜಾರಿದ ಬಸ್ ಮರವೊಂದಕ್ಕೆ ಡಿಕ್ಕಿಯಾಗಿ ನಿಂತಿದೆ.

ತಪ್ಪಿದ ಅಪಾಯ : ಬಸ್ ಬಂದ ರಭಸಕ್ಕೆ ಎಡಬದಿಯ ಮರಕ್ಕೆ ಡಿಕ್ಕಿಯಾಗಿ ಬಲಕ್ಕೆ ತಿರುಗದೆ ಹಾಗೆಯೇ ಕೆಳಗಿಳಿದಿದ್ದರೆ ದೊಡ್ಡ ಕರೆಯೊಳಗೆ ಬೀಳುವ ಸಾಧ್ಯತೆಯಿತ್ತು. ಅದೂ ಅಲ್ಲದೆ ಬಲಭಾಗದಲ್ಲ್ಲೂ ತೋಟದೊಳಗೆ ಮರಕ್ಕೆ ಡಿಕ್ಕಿಯಾಗದೆ ಕೊಂಚ ಮುಂದೆ ಸಾಗಿದ್ದರೂ ಅಲ್ಲಿಯೂ ಒಂದು ಕೆರೆಯಿದ್ದು, ಅದರೊಳಗೆ ಬೀಳುವ ಸಾಧ್ಯತೆಯಿತ್ತು.