ಗೋಣಿಕೊಪ್ಪಲು, ನ.1: ರೈತರು ಬೆಳೆದ ಭತ್ತದ ಫಸಲು ಕೈ ಸೇರುವ ಹಂತದಲ್ಲಿರುವಂತೆಯೇ ಕಾಡಾನೆಯ ಹಿಂಡು ಗದ್ದೆಗೆ ಧಾಳಿ ಮಾಡಿದ ಹಿನೆÀ್ನಲೆಯಲ್ಲಿ ಎರಡು ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆ ನಾಶಗೊಂಡಿದೆ.
ದ.ಕೊಡಗಿನ ಕೆ.ಬಾಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟೇರ ಮುದ್ದಯ್ಯ ಹಾಗೂ ಅಪ್ಪಣ್ಣ ಅವರ ಭತ್ತದ ಗದ್ದೆಗೆ ಕಾಡಾನೆಯ ಹಿಂಡು ಗುರುವಾರ ರಾತ್ರಿ ಧಾಳಿ ಮಾಡಿದ್ದು ಭತ್ತದ ಬೆಳೆಗಳು ನಾಶಗೊಂಡಿವೆ. 13ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳು ಈ ಭಾಗದ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದು, ಸಂಜೆಯ ವೇಳೆಯಲ್ಲಿ ಸಮೀಪದ ರೈತರ ಗದ್ದೆಗಳಿಗೆ ತೆರಳಿ ಫಸಲುಗಳನ್ನು ನಾಶ ಮಾಡುತ್ತಿವೆ. ಏಕಾಏಕಿ ಧಾಳಿ ನಡೆಸುತ್ತಿರುವದರಿಂದ ಗದ್ದೆ ಸಂಪೂರ್ಣ ಹಾಳಾಗಿವೆ. ಮುಂಜಾನೆವರೆಗೂ ಭತ್ತದ ಗದ್ದೆಯಲ್ಲಿಯೇ ಬೀಡುಬಿಡುವ ಈ ಕಾಡಾನೆಯ ಹಿಂಡು ಬೆಳಕು ಹರಿಯುತ್ತಿದ್ದಂತೆ ಸಮೀಪದ ಕಾಡಿಗೆ ತೆರಳುತ್ತಿವೆ.
ರೈತ ಕುಟುಂಬಗಳು ವಾರ್ಷಿಕವಾಗಿ ಬರುವ ಭತ್ತವನ್ನು ತಮ್ಮ ದೈನಂದಿನ ಉಪಯೋಗಕ್ಕೆ ಬಳಸುತ್ತಿದ್ದರು. ಈ ಕಾಡಾನೆ ಧಾಳಿಯಿಂದ ಇದೀಗ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮುಂದಿನ ವರ್ಷದವರೆಗೂ ಕಾಲ ಕಳೆಯುವದು ಹೇಗೆ ಎಂಬ ಚಿಂತನೆಯಲ್ಲಿ ದಿನ ದೂಡುತ್ತಿದ್ದಾನೆ. ಈ ಭಾಗದಲ್ಲಿ ನಿರಂತರ ಕಾಡಾನೆಯ ಧಾಳಿಯಿಂದ ಭತ್ತದ ಗದ್ದೆಗಳು ಕೊಯ್ಲು ಬರುವ ಸಂದರ್ಭದಲ್ಲಿಯೇ ಇಂತಹ ಸಮಸ್ಯೆಗಳು ಎದುರಾಗುತ್ತಿವೆ.
ದ.ಕೊಡಗಿನ ವಿವಿಧ ಭಾಗದಲ್ಲಿ ನಿರಂತರ ಕಾಡಾನೆ ಧಾಳಿಯಿಂದ ರೈತರ ಗದ್ದೆಗಳು, ಕಾಫಿ ತೋಟಗಳು ಹಾಳಾಗುತ್ತಿವೆ. ಈ ಭಾಗದಲ್ಲಿ 13ಕ್ಕೂ ಅಧಿಕ ಕಾಡಾನೆಗಳು ಗುಂಪುಗೂಡಿ ದಾಂಧಲೆ ನಡೆಸುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕೆಲಸ ತುರ್ತಾಗಿ ಕೈಗೊಳ್ಳಬೇಕು. ಈ ಭಾಗದ ರೈತರು ಭತ್ತದ ಫಸಲನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೀಗ ಭತ್ತದ ಗದ್ದೆ ನಾಶವಾಗಿರುವದರಿಂದ ಅರಣ್ಯ ಇಲಾಖೆಯು ರೈತನ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಿ ಪರಿಹಾರ ಧನ ವಿತರಿಸಬೇಕು ಎಂದು ರೈತ ಅಜ್ಜಮಾಡ ಚಂಗಪ್ಪ ಒತ್ತಾಯಿಸಿದ್ದಾರೆ.