ನಾಪೋಕ್ಲು, ಅ.31: ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರಬರಲು ಪ್ರತಿಭಾ ಕಾರಂಜಿ, ಕಲೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಹೇಳಿದರು. ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ನಾಪೋಕ್ಲು ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಶಿಕ್ಷಕರ ಪ್ರಯತ್ನದಿಂದ ಪಠ್ಯಚಟುವಟಿಕೆಗಳ ಜೊತೆ ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಲ್ಲಿರುವ ಸಾಮಥ್ರ್ಯವನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳ ನಡುವೆ ನಡೆಯುವ ಸ್ಪರ್ಧೆಯಿಂದ ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರಬರಲು ಸಾಧ್ಯ ಎಂದರು. ಶಾಲಾ ಮುಖ್ಯ ಶಿಕ್ಷಕ ಸುರೇಶ್‍ಕುಮಾರ್ ಶಿಕ್ಷಕರಾದ ಮೆಹಬೂಬ್ ಸಾಬ್, ಸುಬ್ರಮಣಿ, ಮಾದೇಶ್, ಜಯಮ್ಮ, ಪವಿತ್ರ ಪಾಲ್ಗೊಂಡಿದ್ದರು. ಬಳಿಕ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಜರುಗಿದವು. ಕಂಠಪಾಠ, ಭಾಷಣ, ಪ್ರಬಂಧ, ನೃತ್ಯ, ಏಕಪಾತ್ರಾಭಿನಯ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮೆರೆದರು. ನಾಪೋಕ್ಲು, ಎಮ್ಮೆಮಾಡು, ಬಲ್ಲಮಾವಟಿ ಗ್ರಾಮಗಳ ವಿವಿಧ ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.