ಗೋಣಿಕೊಪ್ಪ ವರದಿ, ಅ. 31 : ವೀರಾಜಪೇಟೆ ತಾಲೂಕಿನ ಎಲ್ಲಾ ನಿವೇಶನ ರಹಿತ ಅರ್ಜಿದಾರರಿಗೆ ನಿವೇಶನ ನೀಡಲು ಜಾಗ ಗುರುತಿಸಿಕೊಂಡು ಹಂತ ಹಂತವಾಗಿ ಯೋಜನೆ ರೂಪಿಸಲಾಗುವದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಷಣ್ಮುಗ ಹೇಳಿದರು.

ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೆ 7691 ನಿವೇಶನ ರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಸುಮಾರು 381 ಏಕರೆ ಜಾಗದ ಅವಶ್ಯಕತೆ ಇದೆ. ಜಾಗ ದೊರೆತ ಕೂಡಲೇ ಹಂತ ಹಂತವಾಗಿ ಆಯಾ ಭಾಗದ ನಿರಾಶ್ರಿತರಿಗೆ ನಿವೇಶನ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ತಹಶೀಲ್ದಾರ್ ಮಹೇಶ್ ಮಾತನಾಡಿ, ಬುಡಕಟ್ಟು ಜನಾಂಗದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ 2 ಏಕರೆ ಜಾಗ ಪಡೆದವರು ಮತ್ತೆ ನಿವೇಶನಕ್ಕಾಗಿ ಒತ್ತಾಯಿಸುತ್ತಿರುವ ಘಟನೆಗಳು ನಡೆಯುತ್ತಿದೆ. ಈ ಬಗ್ಗೆ ಐಟಿಡಿಪಿ ಇಲಾಖೆ ಮುತುವರ್ಜಿ ವಹಿಸಿಕೊಂಡು ಅಂತಹ ಕಡತ ವಿಲೇವಾರಿ ಬಗ್ಗೆ ಜಾಗ್ರತೆ ವಹಿಸಬೇಕು ಎಂದರು.

ಆಯಾ ಗ್ರಾಮದವರಲ್ಲದವರು ನಿರಾಶ್ರಿತರು ಎಂದು ಕೆಲವೊಂದು ಸರ್ಕಾರಿ ಜಾಗದಲ್ಲಿ ಸೇರಿಕೊಂಡಿರುವವರಿಗೆ ನಿವೇಶನ ಕಲ್ಪಿಸಬಾರದು ಎಂದು ಉಪಾಧ್ಯಕ್ಷ ನೆಲ್ಲೀರ ಚಲನ್ ಹೇಳಿದರು. ಗ್ರಾಮದವರಿಗೆ ಮಾತ್ರ ಅವಕಾಶ ನೀಡಬೇಕು ಎಂದರು.

ಲೈನ್‍ಮನ್‍ಗಳು ಗ್ರಾಹಕರಿಂದ ಬಿಲ್ ಪಾವತಿಗೆ ಹೆಚ್ಚು ಒತ್ತು ನೀಡುವದನ್ನು ಬಿಟ್ಟು ಮನೆಗಳಿಗೆ ನಿರಂತರ ವಿದ್ಯುತ್ ಸೌಲಭ್ಯ ನೀಡುವದಕ್ಕೆ ತೊಡಗಿಕೊಳ್ಳಬೇಕು ಎಂದು ನೆಲ್ಲೀರ ಚಲನ್ ಹೇಳಿದರು..

ತಹಶೀಲ್ದಾರ್ ಮಹೇಶ್ ಮಾತನಾಡಿ, ಮಳೆಹಾನಿ ಪರಿಹಾರದ ನಿಧಿಯಿಂದ ಶೇ. 14 ರಷ್ಟು ಮನೆಹಾನಿಯಾಗಿರುವ ಬಗ್ಗೆ ಬಂದಿದ್ದ ಸುಮಾರು 155 ಮನೆಗಳ ಅರ್ಜಿಗಳನ್ನು ರದ್ದು ಪಡಿಸಲಾಗಿದೆ. ಈ ಬಾರಿಯ ಮಳೆಗೆ ತೋರ ಗ್ರಾಮದ 10 ಜನರು, ಪರಕಟಗೇರಿ ಗ್ರಾಮದ ಒಬ್ಬ ವ್ಯಕ್ತಿ ದುರ್ಮರಣವಾಗಿರುವದರಿಂದ ಸಾವನಪ್ಪಿರುವ ಒಟ್ಟು 11 ಜನರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಗೋಣಿಕೊಪ್ಪ, ಪೊನ್ನಂಪೇಟೆ, ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಒಗಳು ಕಸ ವಿಂಗಡಣೆ ಯೋಜನೆಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ತಹಶೀಲ್ದಾರ್ ಮಹೇಶ್ ತಿಳಿಸಿದರು.

ಗಾಳಿ, ಮಳೆ ಸಂದರ್ಭ ರಸ್ತೆಗಡ್ಡವಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸುವ ಸಂದರ್ಭ ರಸ್ತೆಯ ಎರಡು ಕಡೆಗಳಲ್ಲಿ ಉಳಿದು ಕೊಂಡಿರುವ ಮರದ ನಾಟಗಳನ್ನು ಅರಣ್ಯ ಇಲಾಖೆ ತೆರವುಗಳಿಸಲು ಮುಂದಾಗಬೇಕಿದೆ. ರಸ್ತೆಯಲ್ಲಿ ಸಾಗುವಷ್ಟು ಮಾತ್ರ ಜಾಗವಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗುವಂತೆ ಮಾಡಬೇಕು ಎಂದು ತಹಶೀಲ್ದಾರ್ ಮಹೇಶ್ ಹೇಳಿದರು.

ಪಡಿತರ ಚೀಟಿಯಲ್ಲಿನ ಲೋಪ ಸರಿಪಡಿಸಲು ಗ್ರಾಮ ಪಂಚಾಯಿತಿಗಳಲ್ಲಿ ತಿದ್ದುಪಡಿ, ಸೇರ್ಪಡೆಗೆ ವಾರದ ಎರಡು ದಿನಗಳ ಅವಕಾಶ ಮಾಡಿಕೊಡಲಾಗುವದು ಎಂದು ಆಹಾರ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜೆನ್ನಿಸ್ ಉಪಸ್ಥಿತರಿದ್ದರು.