ವೀರಾಜಪೇಟೆ, ಅ. 31: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು ಒಂದು ವರ್ಷವಾದರೂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಕಾನೂನು ತೊಡಕು ಉಂಟಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ.ತಕ್ಷಣ ಸರಕಾರ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸದಸ್ಯರುಗಳು ಆಗ್ರಹಿಸಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸಭೆ ಬಳಿಕ ಪಂಚಾಯಿತಿಯ ಒಂಬತ್ತನೇ ವಾರ್ಡ್‍ನ ಸದಸ್ಯ ಕೆ.ಎಚ್. ಮಹಮ್ಮದ್ ರಾಫಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ 2018ರ ಅಕ್ಟೋಬರ್ 31 ಪಟ್ಟಣ ಪಂಚಾಯಿತಿಯ ಹದಿನೆಂಟು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ತಾಲೂಕು ಆಡಳಿತದ ಚುನಾವಣಾ ವಿಭಾಗದಿಂದ 18ಮಂದಿಗೂ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ದೃಢೀಕರಣ ಪತ್ರ ನೀಡಲಾಗಿದೆ. ಆದರೆ ಈ ತನಕ ಅಧ್ಯಕ್ಷರ ಉಪಾಧ್ಯಕ್ಷರ ಆಯ್ಕೆ ನಡೆಯದಿರುವದರಿಂದ ಸದಸ್ಯರುಗಳ ಯಾವದೇ ಸಭೆ ನಡೆದಿಲ್ಲ. ಪಟ್ಟಣ ಪಂಚಾಯಿತಿಯ ಕ್ಷೇತ್ರವಾರು ಅಭಿವೃದ್ಧಿಗೂ ಹಿನ್ನಡೆ ಉಂಟಾಗಿದೆ ಎಂದು ಹೇಳಿದರು.

ಎರಡನೇ ವಾರ್ಡ್‍ನ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ ಅಧ್ಯಕ್ಷ ಉಪಾಧ್ಯಕ್ಷ ಪದವಿಗಳಿಗೆ ಇನ್ನು ಚುನಾವಣೆ ನಡೆಯದಿರುವದರಿಂದ ಪಟ್ಟಣ ಪಂಚಾಯಿತಿಯಲ್ಲಿ ಸದಸ್ಯರುಗಳು ಸಭೆ ಸೇರದೆ ಯಾವದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಾಧಿಕಾರಿಯಲ್ಲಿ ಹೇಳಿಕೊಂಡು ಪರಿಹಾರ ಮಾಡಿಕೊಳ್ಳಬೇಕಿದೆ. ಮುಖ್ಯಾಧಿಕಾರಿಗಳು ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುತಿದ್ದರೂ ಪೂರ್ಣ ಮಟ್ಟದಲ್ಲಿ ಕೆಲಸವಾಗುತ್ತಿಲ್ಲ ಎಂದರು.

ಹದಿನಾಲ್ಕನೇ ವಾರ್ಡ್‍ನ ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯದೆ ಯಾವದೇ ಕೆಲಸವಾಗುತ್ತಿಲ್ಲ. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವದೇ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹಿನ್ನಡೆ ಉಂಟಾಗುತ್ತಿದೆ ಎಂದರು.

ಮೂರನೇ ವಾರ್ಡ್‍ನ ಸದಸ್ಯ ಡಿ.ಪಿ. ರಾಜೇಶ್ ಮಾತನಾಡಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದಿದ್ದರೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸದಸ್ಯರುಗಳಿಗೆ ಇನ್ನು ಅಧಿಕಾರ ಅಧಿಕೃತವಾಗಿ ದೊರೆತಂತಾಗಿಲ್ಲ. ಚುನಾಯಿತ ಸದಸ್ಯರುಗಳೆಲ್ಲರು ಸೇರಿ ರಾಜಕೀಯ ರಹಿತವಾಗಿ ಅಭಿವೃದ್ಧಿ ಕೆಲಸಕ್ಕೆ ಬೆಂಬಲಿಸೋಣ ಎಂದರು. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸದಸ್ಯರುಗಳ ಕ್ಷೇತ್ರದ ಸಮಸ್ಯೆಗಳಿಗೆ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು.

ಚಿಕ್ಕಪೇಟೆ ಕ್ಷೇತ್ರದ ಸದಸ್ಯೆ ಆಶಾ ಸುಬ್ಬಯ್ಯ ಮಾತನಾಡಿ ಕ್ಷೇತ್ರದ ನಿವಾಸಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿರುವ ವಿಷಯ ತಿಳಿದಿಲ್ಲ. ಕ್ಷೇತ್ರದಲ್ಲಿ ಯಾವದೇ ಕೆಲಸವಾಗುತ್ತಿಲ್ಲವೆಂದು ದೂರುತಿದ್ದಾರೆ ಎಂದರು.

ಗೋಷ್ಠಿಯಲ್ಲಿ ಹಾಜರಿದ್ದ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಕೆ.ಬಿ. ಹರ್ಷವರ್ಧನ್, ವಿ.ಆರ್. ರಜನಿಕಾಂತ್, ಸಿ.ಜಿ. ಆಗಸ್ಟೀನ್‍ಬೆನ್ನಿ, ಮಹಿಳಾ ಸದಸ್ಯರುಗಳಾದ ಜೆ. ಫಸಿಹತಬ್ಸಮ್ ಟಿ.ಆರ್. ಸುಶ್ಮಿತಾ, ಟಿ.ಎಂ. ಸುನೀತ ಜೂನಾ, ಹಾಗೂ ಪೂರ್ಣಿಮಾ ಇವರುಗಳು ಮಾತನಾಡಿ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷ ಪದವಿಗಳಿಗೆ ಸರಕಾರ ತಕ್ಷಣ ಚುನಾವಣೆ ನಡೆಸಬೇಕು. ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಅನೇಕ ತಿಂಗಳಾದರೂ ಸದಸ್ಯರುಗಳಿಗೆ ಆಸಕ್ತಿಯಿಂದ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಸರಕಾರ ಮನಗಾಣಬೇಕು ಎಂದು ಹೇಳಿದರು.