ಸುಂಟಿಕೊಪ್ಪ, ಅ. 31: ರಾಷ್ಟೀಯ ಹೆದ್ದಾರಿಯ ಬದಿಯಿಂದ ನಾಕೂರು-ಶಿರಂಗಾಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು, ಶಾಲಾಮಕ್ಕಳು ಸಾರ್ವಜನಿಕರು ವಾಹನ ಚಾಲಕರು ಈ ರಸ್ತೆಗಾಗಿ ಬರಲು ಹರ ಸಾಹಸ ಪಡಬೇಕಾಗಿದೆ. ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯನ್ವಯ 2008ರಲ್ಲಿ ನಿರ್ಮಿಸಿದ ರಸ್ತೆ ಹದಗೆಟ್ಟು ಹೋಗಿದೆ. ರಸ್ತೆ ಬಗ್ಗೆ ಗ್ರಾಮಸ್ಥರು ಅಪಸ್ವರ ಎತ್ತಿದ್ದರೂ ಅದು ಅರಣ್ಯರೋದನವಾಯಿತು. ಅನಂತರ ಗುಂಡಿ ಮುಚ್ಚಿ ತೇಪೆ ಹಾಕುವ ಕೆಲಸ ಮಾಡಿದರೂ ಸಂಚರಿಸಲು ಕಷ್ಟಸಾಧ್ಯವಾಗಿದೆ. ನಾಕೂರು-ಶಿರಂಗಾಲ ಕಲ್ಲೂರು ಮಳ್ಳೂರಿಗಾಗಿ ಈ ರಸ್ತೆ ಬಸವನಹಳ್ಳಿಗೆ ಸಂಪರ್ಕ ಕಲ್ಪಿಸಲಿದ್ದು, ಪ್ರತಿ ನಿತ್ಯ ಶಾಲಾ ವಾಹನಗಳು ಕೂಲಿ ಕಾರ್ಮಿಕರನ್ನು ಕರೆದೊಯ್ಯುವ ವಾಹನ ಸಂಚರಿಸಲಾಗದೆ ಸಮಸ್ಯೆ ಎದುರಿಸುವಂತಾಗಿದೆ. ಈ ರಸ್ತೆಯಲ್ಲಿ ಗುಂಡಿ ಬಿದ್ದಿದು, ಆಟೋ ಚಾಲಕರು ಸಹ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯನ್ನು ಕೂಡಲೇ ಸರಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.