ಕೂಡಿಗೆ, ಅ. 31: ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ ಹೆಬ್ಬಾಲೆ ಶಿರಂಗಾಲ, ತೊರೆನೂರು ಭಾಗಗಳಲ್ಲಿ ಗ್ರಾಮೀಣ ಸೊಗಡಿನ ಜಾನಪದ ಮಾದರಿಯಲ್ಲಿ ದೀಪಾವಳಿ ಹಬ್ಬವನ್ನು ಗ್ರಾಮಸ್ಥರು ಆಚರಣೆ ಮಾಡಿದರು.
ಹಬ್ಬದ ಅಂಗವಾಗಿ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಆಯಾ ಗ್ರಾಮಗಳಲ್ಲಿ ಕಾರ್ತಿಕ ಮಾಸದ ಪೂಜೆ ಪ್ರಾರಂಭಿಸಲಾಯಿತು. ರೈತರು ಸಾಕಿದ ದನಕರುಗಳಿಗೆ ಸ್ನಾನ ಮಾಡಿಸಿ ಅವುಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಇದರ ಜೊತೆಗೆ ತಮ್ಮ ತಮ್ಮ ಜಮೀನಿಗೆ ತೆರಳಿ ಅಲ್ಲಿಯೂ ಪೂಜೆ ಸಲ್ಲಿಸಿದರು. ಹಿಂದಿನ ಕಾಲದಿಂದ ನಡೆಸಿಕೊಂಡು ಬಂದ ಸಂಪ್ರದಾಯದಂತೆ ಪೂಜೆ ಕಾರ್ಯವನ್ನು ಗ್ರಾಮಸ್ಥರು ಒಟ್ಟಿಗೆ ಸೇರಿ ನಡೆಸಿದರು.*ಗೋಣಿಕೊಪ್ಪಲು: ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಇವರ ವತಿಯಿಂದ ದೀಪಾವಳಿಯ ಪ್ರಯುಕ್ತ ಗೋಪೂಜೆ ನಡೆಸಲಾಯಿತು.
ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನದ ಆವರಣದಲ್ಲಿ ಗೋವುಗಳನ್ನು ಹೂವಿನಿಂದ ಶೃಂಗರಿಸಿ, ಆರತಿ ಬೆಳಗಿ, ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಮುಕ್ಕೋಟಿ ದೇವರನ್ನು ನೆನೆದು ಪೂಜಿಸಿದರು. ಹಿಂದೂ ಧರ್ಮದಲ್ಲಿ ಭಗವಂತನ ಸ್ಥಾನವನ್ನು ಹೊಂದಿರುವ ಗೋವುಗಳು ಬಹಳ ಪವಿತ್ರತೆಯನ್ನು ಹೊಂದಿದೆ. ಇಂತಹ ಗೋವುಗಳ ಸಂತತಿಯನ್ನು ಉಳಿಸಿ ಬೆಳಸಬೇಕಾಗಿದೆ ಎಂದು ಜಾಗೃತಿ ಮೂಡಿಸಲಾಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ಹಂಚಲಾಯಿತು. ಸಂಘದ ಪ್ರಮುಖರಾದ ಸುಬ್ರಮಣಿ, ಭರತ್, ಮಂಜು ಮಾಯಮುಡಿ, ವಿವೇಕ್ ಸೇರಿದಂತೆ ಕಾವೇರಿ ಕಾಲೇಜಿನ ಎಬಿವಿಪಿ ಸಂಘದ ವಿದ್ಯಾರ್ಥಿಗಳು, ರಾಷ್ಟ್ರೀಯ ಸ್ವಯಂ ಸೇವಕರು ಹಾಜರಿದ್ದರು.
ಕೂಡಿಗೆ: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದಲ್ಲಿರುವ ಶನೀಶ್ವರ ದೇವಾಲಯ ಆವರಣದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ದೀಪೋತ್ಸವ ಕಾರ್ಯಕ್ರಮ ಜರುಗಿತು. ಶನೀಶ್ವರ ದೇವಾಲಯವನ್ನು ಮಣ್ಣಿನ ಹಣತೆಯಿಂದ ಅಲಂಕರಿಸಿಲಾಗಿತ್ತು. ಹಬ್ಬದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿಕಾರ್ಯಗಳು ನಡೆದವು. ಈ ಸಂದರ್ಭ ದೇವಾಲಯ ವ್ಯವಸ್ಥಾಪಕ ಕೃಷ್ಣೇಗೌಡ ಸೇರಿದಂತೆ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.ಶನಿವಾರಸಂತೆ: ಇಲ್ಲಿನ ಸುಪ್ರಜಾ ಗುರುಕುಲ ವಿದ್ಯಾಸಂಸ್ಥೆಯ 250 ವಿದ್ಯಾರ್ಥಿಗಳು ಸಂಸ್ಥೆ ಅಧ್ಯಕ್ಷೆ ಡಿ. ಸುಜಲಾದೇವಿ, ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಶಿಕ್ಷಕರ ಜತೆಯಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಿ, ಪ್ರತಿಜ್ಞಾವಿಧಿ ಸ್ವೀಕರಿಸಿದರು.ಮಡಿಕೇರಿ: ನಗರದ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯಿಂದ 5ನೇ ವರ್ಷದ ಸಂಭ್ರಮದ ಬೆಳಕಿನ ಹಬ್ಬ ದೀಪಾವಳಿ ಆಚರಣೆಯು “ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರವನ್ನು ಸಂರಕ್ಷಿಸಿ” ಎಂಬ ಸಂದೇಶದೊಂದಿಗೆ ಮಡಿಕೇರಿ ನಗರದ ರಾಘವೇಂದ್ರ ದೇಗುಲದ ಬಳಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಕಳೆದ ವರ್ಷ ದೀಪಾವಳಿ ಉತ್ಸವವನ್ನು “ಕೊಡಗಿನ ಪ್ರಕೃತಿ ವಿಕೋಪದಿಂದ ನೊಂದವರ ಬಾಳಲ್ಲಿ ಬೆಳಕು ಮೂಡಲಿ” ಎಂಬ ಸಂದೇಶದೊಂದಿಗೆ ಸಾಂಪ್ರದಾಯಿಕವಾಗಿ ಆಚರಿಸಿದ್ದು ಇಲ್ಲಿ ಸ್ಮರಣೀಯ.
ತಾ. 27 ರಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಓಟದ ಸ್ಪರ್ಧೆ, ಬಾಂಬ್ ಇನ್ ದ ಸಿಟಿ, ಜನಪದ ಕ್ರೀಡಾಕೂಟಗಳು, ಹಗ್ಗಜಗ್ಗಾಟ ಮುಂತಾದ ಕ್ರೀಡಾಕೂಟಗಳು ನಡೆದವು. ಈ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ತಾ. 29 ರಂದು ಮಧ್ಯಾಹ್ನದ ನಂತರ ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ ಮತ್ತು ಸಂಜೆ 7 ಗಂಟೆಯಿಂದ ವೇದಿಕೆಯಲ್ಲಿ ಮುಖ್ಯ ಅತಿಥಿಗಳು ಹಾಗೂ ವೇದಿಕೆಯಲ್ಲಿದ್ದ ಸರ್ವರೂ ಒಡಗೂಡಿ ದೀಪವನ್ನು ಬೆಳಗಿಸುವ ಮುಖಾಂತರ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇತ್ತೀಚೆಗೆ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇದಿಕೆಯ ಸದಸ್ಯನೋರ್ವರ ತಾಯಿಗೆ ಹಣಕಾಸಿನ ನೆರವನ್ನು ನೀಡಲಾಯಿತು. ಪ್ರಕೃತಿ ವಿಕೋಪದಿಂದ ನರಳಿದ ಹಲವರಿಗೆ ವೇದಿಕೆ ವತಿಯಿಂದ ನೆರವನ್ನು ನೀಡಲಾಯಿತು. ಬಳಿಕ ಮಕ್ಕಳ ಮಂಟಪ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ಮಕ್ಕಳ ಮಂಟಪಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರಶಸ್ತಿ ಪತ್ರ, ಬಹಮಾನವನ್ನು ವಿತರಿಸಲಾಯಿತು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ “ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರವನ್ನು ಸಂರಕ್ಷಿಸಿ” ಎಂಬ ಸಂದೇಶದೊಂದಿಗೆ ಸುಮಾರು 800ಕ್ಕೂ ಹೆಚ್ಚು ಗಿಡಗಳನ್ನು ವಿತರಿಸಲಾಯಿತು.
“ಈಗಾಗಲೇ ನಾವು ಪ್ರಕೃತಿಯನ್ನು ಬಹಳಷ್ಟು ಹಾಳುಗೆಡವಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ನಮ್ಮ ಪೀಳಿಗೆ ಬಹುದೊಡ್ಡ ಆಪತ್ತನ್ನು ಎದುರಿಸಬೇಕಾಗುತ್ತದೆ. ಹಾಗಾಗಬಾರದೆಂದರೆ ಗಿಡಗಳನ್ನು ನೆಟ್ಟು ಬೆಳೆಸಬೇಕು. ಮರಗಳು ಹೆಚ್ಚಿನ ಪ್ರಮಾಣದಲ್ಲಿ ಪರಿಸರದಲ್ಲಿ ಕಾಣುವಂತಾಗಬೇಕು” ಎಂದು ಕಾರ್ಯಕ್ರಮವನ್ನು ಆಯೋಜಿಸಿದ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯ ಸರ್ವ ಸದಸ್ಯರು ಸಂದೇಶವನ್ನು ಸಾರಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಅರಣ್ಯ ಇಲಾಖೆ ಸಿಬ್ಬಂದಿಯಾದ ಆಶಾ ನಟರಾಜ್, ನಿವೃತ್ತ ಶಿಕ್ಷಕಿ ಕಲಾವತಿ ಟೀಚರ್, ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜದ ಅಧ್ಯಕ್ಷೆ ರಾಣಿ ಅರುಣ್, ಹೊಟೇಲ್ ಉದ್ಯಮಿ ಕಾಳಚಂಡ ಪವನ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ, ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ, ಮಡಿಕೇರಿ ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎಸ್. ರಮೇಶ್ ಹಾಗೂ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷ ಮಹೇಶ್ ಮತ್ತಿತರರಿದ್ದರು.ಶನಿವಾರಸಂತೆ: ಪಟ್ಟಣದ ಜನತೆ 3 ದಿನಗಳ ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಸಂಭ್ರಮ ಸಡಗರದಿಂದ ಆಚರಿಸಿದರು.