ವೀರಾಜಪೇಟೆ, ಅ. 31: ಯುವತಿಯ ವಿಚಾರದಲ್ಲಿ ಸಂಬಂಧಿಕರ ಮಧ್ಯೆ ಜಗಳವೇರ್ಪಟ್ಟು ಅಸ್ಪತ್ರೆಗೆ ದಾಖಲಾದ ಘಟನೆ ನಡೆದಿದ್ದು, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಡ ಗ್ರಾಮದ ವಕೀಲರಾದ ಜಗದೀಶ್ ಅವರ ತೋಟದ ಲೈನ್ ಮನೆಯಲ್ಲಿ ವಾಸವಿರುವ ಗಣೇಶ್ (67) ಮಾರಣಾಂತಿಕ ಹಲ್ಲೆಗೆ ಒಳಗಾಗಿ ಅಸ್ಪತ್ರೆಗೆ ದಾಖಲಾದ ವ್ಯಕ್ತಿ.

ಘಟನೆಯ ವಿವರ: ಕರಡ ಗ್ರಾಮದಲ್ಲಿ ವಾಸ ಮಾಡುವ ಗಣೇಶ್ ಕೂಲಿ ಕಾರ್ಮಿಕರಾಗಿದ್ದು ಇವರಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಇವರ ಸಂಬಂಧಿಕರಾದ ತಮಿಳುನಾಡಿನ ಚೆನ್ನೈನಲ್ಲಿ ವಾಸವಿರುವ ಜಯರಾಮ, ಗಣೇಶ್ ಅವರ ಪ್ರಥಮ ಪುತ್ರಿ ಕೌಶಲ್ಯಳನ್ನು ಪ್ರೀತಿ ಮಾಡುತ್ತಿದ್ದ. ಈ ನಡುವೆ ಜಯರಾಮ ತಾನು ಪ್ರೀತಿ ಮಾಡುತ್ತಿರುವ ಯುವತಿಗೆ ವಂಚಿಸಿ ಮದುವೆಯಾಗಿದ್ದ.

ಇದು ಯುವತಿಗೂ ಮತ್ತು ಕುಟುಂಬದವರಿಗೂ ತಿಳಿದಿರಲಿಲ್ಲ. ಮದುವೆಯಾದ ಮೇಲೂ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿದ್ದು, ತಿಂಗಳು ಉರುಳಿದ ನಂತರ ಯುವತಿಗೆ ಸಂಬಂಧಿಕರ ಮೂಲಕ ಜಯರಾಂ ಮದುವೆಯಾಗಿ ಮಕ್ಕಳ ತಂದೆಯಾಗಿದ್ದಾನೆ ಎಂಬ ವಿಷಯ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯುವತಿಯು ಜಯರಾಮನೊಂದಿಗಿದ್ದ ಸಂಪರ್ಕವನ್ನು ಬಿಟ್ಟಿದ್ದಳು.

ಈ ಬಗ್ಗೆ ಕೇಳಲು ಜಯರಾಮ ತಾ. 29 ರಂದು ಯುವತಿಯ ಮನೆಗೆ (ಕರಡಕ್ಕೆ) ಅಗಮಿಸಿದ್ದಾನೆ. ಗಣೇಶ್ ಮತ್ತು ಮಗಳೊಂದಿಗೆ ಮಾತುಕತೆ ಅರಂಭಿಸಿದ್ದಾನೆ. ಮಾತಿಗೆ ಮಾತು ಬೆಳೆದು ಗಣೇಶ್ ಮತ್ತು ಮಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಬೀರು ಬಾಟಲಿನಿಂದ ಗಣೇಶ್ ಅವರ ತಲೆಯ ಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ತಲೆಯ ಭಾಗದಿಂದ ರಕ್ತ ಚಿಮ್ಮಿ ಮಾರಣಾಂತಿಕ ಗಾಯಗಳಾಗಿವೆ ಮತ್ತು ಯುವತಿಯ ಕುತ್ತಿಗೆ ಭಾಗಕ್ಕೂ ಹಲ್ಲೆ ಮಾಡಿದ್ದಾನೆ.

ಜಯರಾಮನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ವ್ಯಕ್ತಿಗಳು ವೀರಾಜಪೇಟೆ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಉಭಯ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದೆ.

-ಕೆ.ಕೆ.ಎಸ್.