ಕುಶಾಲನಗರ, ಅ. 31: ಕಲಬುರ್ಗಿಯಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ನೇತೃತ್ವದ ತಂಡ ದ್ವಿತೀಯ ಸ್ಥಾನಗಳಿಸಿದ್ದು, ಕಾಲೇಜಿನ ಮೂವರು ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಕಲಬುರ್ಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರ ಕನ್ನಡ ಭಾರತಿ ಕಾಲೇಜು ವಿದ್ಯಾರ್ಥಿಗಳ ಕೊಡಗು ತಂಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಪಿಯು ಕಾಲೇಜುಗಳ ನಡುವೆ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನಗಳಿಸಿದೆ. ಕನ್ನಡ ಭಾರತಿ ಕಾಲೇಜು ತಂಡ ದ್ವಿತೀಯ ಸ್ಥಾನಗಳಿಸಿದ್ದು, ಎರಡು ಕಾಲೇಜಿನ ಆಯ್ದ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕನ್ನಡ ಭಾರತಿ ಪಿಯು ಕಾಲೇಜಿನ ಕ್ರೀಡಾಪಟುಗಳಾದ ಬಿ.ಆರ್. ಮನೋಜ್, ಎನ್. ಕುಮಾರ್, ಬಿ.ಕೆ. ಗೌತಮ್ ಹೈದರಾಬಾದ್‍ನಲ್ಲಿ ನವೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕುಶಾಲನಗರ ಕನ್ನಡ ಭಾರತಿ ಪಿಯು ಕಾಲೇಜಿನ ಧನುಷ್, ನಾಣಯ್ಯ, ಬಿ.ಎಂ. ಗೌತಮ್, ಬಿ.ಆರ್. ಅಕಾಶ್, ಬಿ.ಎನ್. ಶಾಂತಕುಮಾರ್, ಮನೋಜ್, ಕುಮಾರ್, ಗೌತಮ್ ಸೇರಿದಂತೆ ಹತ್ತು ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾ ತಂಡದ ತರಬೇತುದಾರರಾಗಿ ದೈಹಿಕ ಶಿಕ್ಷಣ ಅಧೀಕ್ಷಕ ಚನ್ನಕೇಶವ ಮೂರ್ತಿ ಕಾರ್ಯನಿರ್ವಹಿಸಿದರು.