ಕೂಡಿಗೆ, ಅ. 31: ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪ್ರಸಕ್ತ ಸಾಲಿನಲ್ಲಿ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡುವ ಸಂಬಂಧ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಚಿಂತನ ಮಂಥನ ಕಾರ್ಯಾಗಾರವನ್ನು ನ. 2 ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದು, ಕೊಡಗು ಜಿಲ್ಲೆಯಿಂದ ಕಾರ್ಯಾಗಾರಕ್ಕೆ ಒಂಭತ್ತು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ.

ಬೆಂಗಳೂರಿನ ಕೃಷಿ ವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಗಾಂಧಿ ಗ್ರಾಮ ಪುರಸ್ಕಾರದ ಚಿಂತನ ಮಂಥನ ಕಾರ್ಯಾಗಾರ ನಡೆಯಲಿದ್ದು, ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು, ಗುಡ್ಡೆಹೊಸೂರು, ಹೆಬ್ಬಾಲೆ, ವೀರಾಜಪೇಟೆ ತಾಲೂಕಿನ ಹೊಸೂರು, ಪೊನ್ನಂಪೇಟೆ, ಪೊನ್ನಪ್ಪಸಂತೆ, ಮಡಿಕೇರಿ ತಾಲೂಕಿನ ಗಾಳಿಬೀಡು, ಕೆ. ನಿಡುಗಣೆ, ಎಮ್ಮೆಮಾಡು ಗ್ರಾಮ ಪಂಚಾಯಿತಿಗಳು ಆಯ್ಕೆ ಆಗಿದ್ದು, ಆಯಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡಂತೆ ಈ ಚಿಂತನ ಮಂಥನ ಕಾರ್ಯಾಗಾರ ನಡೆಯಲಿದೆ ಎಂದು ತಿಳಿದು ಬಂದಿದೆ.