ಮಡಿಕೇರಿ, ಅ. 31: ಮಡಿಕೇರಿಯ ಐತಿಹಾಸಿಕ ಕೋಟೆ ಹಾಗೂ ಅರಮನೆಯ ಸಂರಕ್ಷಣೆಯೊಂದಿಗೆ; ತುರ್ತು ದುರಸ್ತಿಗಾಗಿ ಭಾರತೀಯ ಪುರಾತತ್ವ ಇಲಾಖೆ ಹಾಗೂ ಕೊಡಗು ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಅಭಿಯಂತರರು ಜಂಟಿ ಸಮೀಕ್ಷೆ ನಡೆಸಿ; ರೂ. 8,20,45,674 ಮೊತ್ತದ ಅಂದಾಜು ಪಟ್ಟಿ ಸಲ್ಲಿಸಿದ್ದು; ರಾಜ್ಯ ಸರಕಾರದಿಂದ ಈ ಹಣ ಬಿಡುಗಡೆ ಗೊಳಿಸಿ ಇಂದು ಉಚ್ಚ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ.ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಇಂದು ನಡೆದ ವಿಚಾರಣೆಯ ಸಂದರ್ಭ; ಸರಕಾರಿ ವಕೀಲ ಅಚ್ಚಪ್ಪ ಅವರು; ಈಗಾಗಲೇ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಕೋಟೆ ಹಾಗೂ ಅರಮನೆಯ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮದ ಕುರಿತು; ಕಂದಾಯ ಇಲಾಖೆ ಕಾರ್ಯದರ್ಶಿ ಮಂಜುನಾಥ್ ಮುಖಾಂತರ ಈ ಪ್ರಮಾಣ ಪತ್ರ ಸಲ್ಲಿಸಿದರು.

ನಿವೃತ್ತ ಅಧಿಕಾರಿ ವಿರೂಪಾಕ್ಷಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು; ಸರಕಾರದಿಂದ ಕೈಗೊಳ್ಳಲಿರುವ ಮುಂದಿನ ಅಭಿವೃದ್ಧಿ ಕೆಲಸಗಳ ಕುರಿತು ಸಮರ್ಪಕ ವರದಿಗೆ ಆದೇಶಿಸಿ; ನ. 12ಕ್ಕೆ ವಿಚಾರಣೆ ಮುಂದೂಡಿತು. ಮೇಲಿನ ಪ್ರಕರಣದಲ್ಲಿ ಅರ್ಜಿದಾರರ ಪರ ವಕೀಲ ಎನ್. ರವೀಂದ್ರನಾಥ್ ಕಾಮತ್ ವಕಾಲತ್ತು ವಹಿಸಿದ್ದಾರೆ.