ಮಡಿಕೇರಿ, ಅ. 31: ಮಡಿಕೇರಿಯ ಐತಿಹಾಸಿಕ ಕೋಟೆಯೊಳಗಿನ ಅರಮನೆ ಪರಿಸರದಲ್ಲಿದ್ದ ಬಹುತೇಕ ಕಚೇರಿಗಳನ್ನು ಇಂದು ಅಂತಿಮವಾಗಿ ತೆರವುಗೊಳಿಸಿದ್ದು; ಜಿಲ್ಲಾ ಪಂಚಾಯಿತಿ ಕಚೇರಿ ಸಾಮಾಗ್ರಿಗಳನ್ನು ನೂತನ ಜಿ.ಪಂ. ಭವನಕ್ಕೆ ಸಾಗಿಸಲಾಯಿತು. ಲೋಕೋಪಯೋಗಿ ಇಲಾಖೆ ವಸ್ತುಗಳನ್ನು ತಾತ್ಕಾಲಿಕವಾಗಿ ಮಂಗಳೂರು ರಸ್ತೆಯ ಪ್ರವಾಸಿ ಮಂದಿರಕ್ಕೆ ಕೊಂಡೊಯ್ಯಲಾಯಿತು. ಸ್ವತಃ ಆಯಾ ಇಲಾಖೆ ಕಚೇರಿ ಸಿಬ್ಬಂದಿಗಳು; ತಮ್ಮ ತಮ್ಮ ಸುಪರ್ದಿಯ ಕಡತಗಳೊಂದಿಗೆ ಇತರ ವಸ್ತುಗಳ ಸಾಗಾಟ ದೃಶ್ಯ ಗೋಚರಿಸಿತು.ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ಅರಮನೆಯ ಕಚೇರಿಗಳ ತೆರವಿಗೆ ಅಂತಿಮ ಗಡುವು ನೀಡಿದ್ದರಿಂದ; ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಸಹಿತ ಇತರ ಇಲಾಖೆಗಳ ತೆರವುಗೊಳಿಸುವ ಕೆಲಸ ಬಿರುಸಿನಿಂದ ಸಾಗುವಂತಾಯಿತು.

(ಮೊದಲ ಪುಟದಿಂದ)ಖುದ್ದು ವೀಕ್ಷಣೆ : ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಭಿಯಂತರರು ಸೇರಿದಂತೆ ಇತರ ಅಧಿಕಾರಿಗಳ ತಂಡ ಖುದ್ದು ಹಾಜರಿದ್ದು; ಕಚೇರಿಗಳ ತೆರವಿನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದರು. ಈ ವೇಳೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಇಬ್ರಾಹಿಂ ಅವರು, ಕಾನೂನಿಗೆ ಗೌರವಿಸಿ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ತಮ್ಮ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಡತಗಳು ಹಾಗೂ ಉಪ ಇಲಾಖೆ ಸಾಮಗ್ರಿಗಳನ್ನು ಪ್ರವಾಸಿ ಮಂದಿರಕ್ಕೆ ಕೊಂಡೊಯ್ಯುತ್ತಿರುವದಾಗಿ ವಿವರಿಸಿದರು.

ಮುಂದಿನ ಎರಡು ತಿಂಗಳಲ್ಲಿ ಕಾನ್ವೆಂಟ್ ಬಳಿ ಸ್ವಂತ ಇಲಾಖೆಯ ಕಟ್ಟಡ ಕೆಲಸ ಪೂರ್ಣಗೊಳ್ಳಲಿದ್ದು; ಲೋಕೋಪಯೋಗಿ ಕಚೇರಿಯನ್ನು ನೂತನ ಕಟ್ಟಡಕ್ಕೆ ವರ್ಗಾಯಿಸಲಾಗುವದು ಎಂದರು.

ನಿರ್ದೇಶನದಂತೆ ಕ್ರಮ : ಭಾರತೀಯ ಪುರಾತತ್ವ ಇಲಾಖೆಯ ಸ್ಮಾರಕಗಳ ಸಂರಕ್ಷಣಾ ವಿಭಾಗದ ಸಹಾಯಕ ಸುನಿಲ್, ಸಹಾಯಕ ಅಧೀಕ್ಷಕ ಗುರುಭಾಗಿ ಹಾಗೂ ಕಾರ್ಯಪಾಲಕ ಅಭಿಯಂತರ ರಂಗನಾಥ್ ತಂಡ ಅರಮನೆಯನ್ನು ನ್ಯಾಯಾಲಯದ ನಿರ್ದೇಶನದಂತೆ ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ರಂಗನಾಥ್ ಅವರು; ನ್ಯಾಯಾಲಯದ ನಿರ್ದೇಶನದಂತೆ ಕ್ರಮ ವಹಿಸಲಾಗಿದೆ ಎಂದು ನುಡಿದರು.

ಅಲ್ಲದೆ, ಈಗಾಗಲೇ ಕೊಡಗು ಜಿಲ್ಲಾಡಳಿತದಿಂದ ರೂ. 8 ಕೋಟಿಯ ಯೋಜನೆ ರೂಪಿಸಿ ಅರಮನೆ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ; ಭಾರತೀಯ ಪುರಾತತ್ವ ಇಲಾಖೆಯಿಂದ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಆದೇಶದಂತೆ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವದು ಎಂದು ಮಾರ್ನುಡಿದರು.

ಕಳೆದ 3 ದಶಕಗಳಿಂದ ಕೊಡಗು ಜಿಲ್ಲಾ ಪಂಚಾಯತ್ ಸೇರಿದಂತೆ ಕೋಟೆಯ ಅರಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಗಳು ಇಂದು ಅಂತಿಮವಾಗಿ ವಿದಾಯ ಹೇಳಿದರೆ; ಕೃಷಿ ಇಲಾಖೆ, ಗ್ರಂಥಾಲಯ, ನ್ಯಾಯಾಲಯ ಕಚೇರಿಗಳು ಮಳೆಗಾಲದ ಬಳಿಕ ಸ್ಥಳಾಂತರಗೊಳ್ಳಲಿರುವದಾಗಿ ಮಾಹಿತಿ ಲಭಿಸಿದೆ.