ವೀರಾಜಪೇಟೆ, ಅ. 31: ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಣಗೇರಿ ಗ್ರಾಮದ ಎಸ್.ಎಂ. ಸುರೇಶ್ ಅಲಿಯಾಸ್ ಪ್ರಭು ಎಂಬವರು ಬಂಡಿ ದಾರಿಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸರ್ವೆ ನಕಾಶೆಯ ದಾಖಲೆಯಲ್ಲಿ ತಿಳಿದು ಬಂದ ನಂತರ ಒತ್ತುವರಿ ರಸ್ತೆಯನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಮಹೇಶ್ ನೋಟೀಸ್ ಜಾರಿಗೊಳಿಸಿದ್ದಾರೆ.
ಚೆಂಬೆಬೆಳ್ಳೂರು ಪಂಚಾಯಿತಿ ಸರ್ವೆ ಸಂಖ್ಯೆ 271/1 ಹಾಗೂ 271/4ರ ಮಧ್ಯೆ ಹಾದು ಹೋಗುವ ದಾರಿಯನ್ನು ಗುರುತಿಸಿಕೊಡುವಂತೆ ಎಸ್.ಎಂ. ಅಪ್ಪಚ್ಚು, ಎಂ.ಸಿ. ಮುತ್ತಣ್ಣ, ಎಸ್.ಎಂ. ಸುರೇಶ್ ಇವರುಗಳು ತಹಶೀಲ್ದಾರ್ ಅವರಿಗೆ ನೀಡಿದ ಅರ್ಜಿಯ ಮೇರೆಗೆ ಸರ್ವೆ ಅಧಿಕಾರಿಗಳು ಸ್ಥಳ ಸರ್ವೆ ನಡೆಸಿದಾಗ ಒತ್ತುವರಿ ಕಂಡು ಬಂದಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ರಿಟ್ ಅರ್ಜಿ ಸಂಖ್ಯೆ 3969;2007 ಮತ್ತು ಇತರೆ ರಿಟ್ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ಮಾಡಿದ ಆದೇಶವನ್ನು ಸರ್ಕಾರಿ ಜಮೀನು ಒತ್ತುವರಿದಾರರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 192(ಎ)ರಂತೆ ಕ್ರಮ ಜರುಗಿಸುವ ಮುನ್ನಾ ಒಂದು ಅವಕಾಶ ನೀಡಲು ನಿರ್ದೇಶಿಸಲಾಗಿದೆ. ನೋಟೀಸ್ ಜಾರಿ ಮಾಡಿ 7 ದಿನದೊಳಗೆ ಹಾಜರಾಗದಿದ್ದಲ್ಲಿ ಬಂಡಿ ದಾರಿಯ ಒತ್ತುವರಿಯನ್ನು ಖುಲ್ಲಾ ಪಡಿಸಿ ಜಮೀನನ್ನು ಸರ್ಕಾರದ ವಶಕ್ಕೆ ನೀಡುವದು. ತಪ್ಪಿದಲ್ಲಿ ಈ ಕಾರ್ಯಾಲಯದ ವತಿಯಿಂದ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಜರುಗಿಸಿ ತೆರವುಗೊಳಿಸಲು ತಗಲುವ ವೆಚ್ಚವನ್ನು ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡಲಾಗುವದು ಎಂದು ಸೂಚಿಸಲಾಗಿದೆ.