ಮಡಿಕೇರಿ, ಅ. 30: ಕೊಡವ ಅಟೋನೊಮಸ್ ಡೆವಲಪ್‍ಮೆಂಟ್ ಕೌನ್ಸಿಲ್ ರಚನೆಗೆ ಪೂರಕವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಖ್ಯಾತ ಅರ್ಥಶಾಸ್ತ್ರಜ್ಞ, ಕೇಂದ್ರದ ಮಾಜಿ ಕಾನೂನು ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವದಕ್ಕೆ ಹರ್ಷ ವ್ಯಕ್ತಪಡಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‍ಸಿ) ಕಳೆದ 29 ವರ್ಷಗಳ ಹೋರಾಟ ವ್ಯರ್ಥವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಪ್ರತಿರೋಧಿಸಿ ನವದೆಹಲಿಯಲ್ಲಿ ಸತ್ಯಾಗ್ರಹ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಡಾ. ಸ್ವಾಮಿ ಅವರು, ತಾ. 26 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕರ್ನಾಟಕದಡಿಯಲ್ಲೇ ಕೊಡವ ಅಟೋನೋಮಸ್ ಡೆವಲಪ್‍ಮೆಂಟ್ ಕೌನ್ಸಿಲ್ ರಚನೆಗೆ ಪೂರಕವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಿರುವದು ಅತ್ಯಂತ ಮಹತ್ವದ ವಿಚಾರವಾಗಿದೆ ಎಂದು ಹೇಳಿದರು.

ಪ್ರಖರ ಹಿಂದುಗಳು ಮತ್ತು ಅಪ್ರತಿಮ ರಾಷ್ಟ್ರೀಯವಾದಿಗಳೂ ಆದ ಕೊಡವ ಬುಡಕಟ್ಟು ಜನ ಈ ದೇಶದ ಭದ್ರತೆಗೆ ಸೇನಾ ಪಡೆಯ ಮೂಲಕ ವಿಶೇಷ ಕಾಣಿಕೆ ನೀಡಿದ್ದು, ಅವರ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿ ಅವರ ಸಬಲೀಕರಣಕ್ಕೆ ಕೊಡವ ಅಟೋನೊಮಸ್ ಡೆವಲಪ್‍ಮೆಂಟ್ ಕೌನ್ಸಿಲ್ ತುರ್ತಾಗಿ ಆಗಬೇಕೆಂದು ಕಳೆದ ಸಾಲಿನ ಆಗಸ್ಟ್‍ನಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಅನಂತ್ ಕುಮಾರ್ ಅವರೊಂದಿಗೆ ಚರ್ಚಿಸಲಾಗಿತ್ತು. ಈ ಸಂದರ್ಭ ಕರ್ನಾಟಕದ ಒಳಗಡೆ ಕೊಡವ ಅಟೋನೊಮಸ್ ಡೆವಲಪ್‍ಮೆಂಟ್ ಕೌನ್ಸಿಲ್ ರಚನೆಯಾಗುವದಾದಲ್ಲಿ ತಾನು ಅತ್ಯಂತ ಸಂತೋಷ ಪಡುವದಾಗಿ ದಿವಂಗತ ಅನಂತ್ ಕುಮಾರ್ ಅಂದು ಹೇಳಿದ್ದನ್ನು ಡಾ. ಸ್ವಾಮಿ ಪತ್ರದಲ್ಲಿ ನೆನಪಿಸಿದ್ದಾರೆ ಎಂದು ನಾಚಪ್ಪ ಹೇಳಿದರು.

ಕೊಡವರ ಅಮೋಘ ಕಾಣಿಕೆಯನ್ನು ಪರಿಗಣಿಸಿ ಅವರಿಗೆ ರಾಜ್ಯಾಂಗದತ್ತ ಹಕ್ಕನ್ನು ಅಟೋನೋಮಸ್ ಡೆವಲಪ್‍ಮೆಂಟ್ ಕೌನ್ಸಿಲ್ ಮೂಲಕ ಕಲ್ಪಿಸಬೇಕೆಂದು ಡಾ. ಸ್ವಾಮಿ ಒತ್ತಾಯಿಸಿದ್ದಾರೆ ಎಂದು ತಿಳಿಸಿದರು. ಕಳೆದ 29 ವರ್ಷಗಳ ಆಂದೋಲನದಲ್ಲಿ 25 ವರ್ಷಗಳ ಕಾಲ ನಿರಂತರವಾಗಿ ನವೆಂಬರ್ 1ರ ರಾಜ್ಯೋತ್ಸವ ದಿನದಂದು ಕೊಡವ ಲ್ಯಾಂಡ್ ಅಟೋನೋಮಸ್ ಡೆವಲಪ್‍ಮೆಂಟ್ ಕೌನ್ಸಿಲ್ ರಚನೆಯ ಮೂಲಕ ಅಪೂರ್ಣಗೊಂಡ ಕರ್ನಾಟಕ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕೆಂದು ಸತ್ಯಾಗ್ರಹದ ಮೂಲಕ ಸಿಎನ್‍ಸಿ ಹಕ್ಕೊತ್ತಾಯ ಮುಂದಿಡುತ್ತಲೇ ಬಂದಿತ್ತು. ರಾಜ್ಯೋತ್ಸವ ಆಚರಣೆ ಮತ್ತು ಕೊಡವರ ಸತ್ಯಾಗ್ರಹದ ಬೆನ್ನಲ್ಲೇ ಡಾ. ಸ್ವಾಮಿಯವರಿಂದ ಬಂದಿರುವ ಈ ಪತ್ರ ಬಹಳ ಮಹತ್ವ ಪಡೆದಿದೆ. ಏಕೆಂದರೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಪ್ರಬಲ ಎನ್‍ಡಿಎ- ಬಿಜೆಪಿ ಆಡಳಿತಾಂಗದ ಪ್ರಮುಖ ರಾಷ್ಟ್ರೀಯ ಧುರೀಣರೊಬ್ಬರು ಕೊಡವರ ನೈಜ ಧ್ವನಿಗೆ ಶಾಸನಾತ್ಮಕ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಒತ್ತಾಯ ಪೂರ್ವಕವಾಗಿ ಪ್ರತಿಪಾದಿಸಿರುವದನ್ನು ಕೇಂದ್ರವಾಗಲಿ, ರಾಜ್ಯ ಸರಕಾರವಾಗಲಿ ಲಘವಾಗಿ ಪರಿಗಣಿಸುವಂತಿಲ್ಲ ಎಂದು ನಾಚಪ್ಪ ವಿಶ್ಲೇಷಿಸಿದರು.

ನ. 1 ರಂದು ಪೂರ್ವಾಹ್ನ 9 ರಿಂದ 11.30 ಗಂಟೆಯವರೆಗೆ ದೆಹಲಿಯ ಫ್ರೆಂಚ್ ರಾಯಭಾರಿ ಕಚೇರಿ ಮುಂದೆ ಹಾಗೂ ಪೂರ್ವಾಹ್ನ 11.30 ರಿಂದ ಅಪರಾಹ್ನ 3.30 ಗಂಟೆಯವರೆಗೆ ಸಂಸತ್ ಮಾರ್ಗದಲ್ಲಿ ಸತ್ಯಾಗ್ರಹ ನಡೆಸುವ ಮೂಲಕ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಲಾಗುವದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕಾಟುಮಣಿಯಂಡ ಉಮೇಶ್, ಕೂಪದಿರ ಸಾಬು, ಚಂಬಂಡ ಜನತ್ ಉಪಸ್ಥಿತರಿದ್ದರು.