ಮಡಿಕೇರಿ, ಅ. 30: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‍ನ ಕೊಡಗು ಜಿಲ್ಲಾ ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನ. 1 ರಂದು ನಾಪೋಕ್ಲುವಿನ ಶ್ರೀ ರಾಮ ಟ್ರಸ್ಟ್ ಶಾಲಾ ಆವರಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಸೋಸಿ ಯೇಷನ್‍ನ ಜಿಲ್ಲಾಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಶಿಬಿರ ನಡೆಯಲಿದೆ ಎಂದರು. ಡಯಾಬಿಟಿಕ್, ಹೈಪರ್‍ಟೆನ್‍ಷನ್ ಸ್ಕ್ರೀನಿಂಗ್, ಕ್ಯಾನ್ಸರ್ ಸ್ಕ್ರೀನಿಂಗ್ ಮತ್ತು ದಂತ ಚಿಕಿತ್ಸಾ ಶಿಬಿರ ನಡೆಯಲಿದೆ. ಕೊಡಗು ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್‍ನ ಕೊಡಗು ಘಟಕ, ನಾಪೋಕ್ಲು ಕೊಡವ ಸಮಾಜದ ಸ್ಪೋಟ್ರ್ಸ್ ಮತ್ತು ರಿಕ್ರಿಯೇಷನ್ ಕ್ಲಬ್, ಮಡಿಕೇರಿ ಇನ್ನರ್ ವೀಲ್ ಕ್ಲಬ್, ಶ್ರೀರಾಮ ಟ್ರಸ್ಟ್ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮೈಸೂರಿನ ಸುಯೋಗ್ ಆಸ್ಪತ್ರೆ ಹಾಗೂ ಬೆಂಗಳೂರಿನ ಹೆಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡ ಶಿಬಿರದಲ್ಲಿ ಪಾಲ್ಗೊಳ್ಳಲಿದೆ ಎಂದು ಡಾ. ಮೋಹನ್ ಅಪ್ಪಾಜಿ ತಿಳಿಸಿದರು. ಹೆಚ್.ಸಿ.ಜಿ. ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ಬೆಳ್ಯಪ್ಪ ಕ್ಯಾನ್ಸರ್ ಕುರಿತು ವಿವರಿಸಲಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ.
ಶಿಬಿರವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಉದ್ಘಾಟಿಸಲಿದ್ದು, ಕೊಡಗು ಮೆಡಿಕಲ್ ಕಾಲೇಜ್‍ನ ಮೆಡಿಕಲ್ ಮೇಲುಸ್ತುವಾರಿ ಡಾ. ಲೋಕೇಶ್, ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜ್‍ನ ಪ್ರಾಂಶುಪಾಲ ಡಾ. ಕೆ.ಸಿ. ಪೊನ್ನಪ್ಪ, ಶ್ರೀರಾಮ ಟ್ರಸ್ಟ್ ಶಾಲೆಯ ಅಧ್ಯಕ್ಷ ಬೊಪ್ಪಂಡ ಜಾಲಿ, ಕೊಡವ ಸಮಾಜದ ಸ್ಪೋಟ್ರ್ಸ್ ಮತ್ತು ರಿಕ್ರಿಯೇಷನ್ ಕ್ಲಬ್‍ನ ಅಧ್ಯಕ್ಷ ಬಿದ್ದಾಟಂಡ ತಮ್ಮಿ ಉಪಸ್ಥಿತರಿರುವರು.
ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನು ಕೂಡ ನಿಗದಿಪಡಿಸಿದ ದಿನಾಂಕದಂದು ಮಾಡಲಾಗುವ ದೆಂದು ಡಾ. ಮೋಹನ್ ಅಪ್ಪಾಜಿ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 9845471569 ಮತ್ತು 9972837990 ಯನ್ನು ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ನಾಪೋಕ್ಲು ದಂತ ವೈದ್ಯ ಡಾ. ಬೋಪಣ್ಣ, ಶ್ರೀರಾಮ ಟ್ರಸ್ಟ್ ಶಾಲೆಯ ಅಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ ಹಾಗೂ ಉಪಾಧ್ಯಕ್ಷ ಕೆ.ಎಂ. ಮಂದಣ್ಣ ಉಪಸ್ಥಿತರಿದ್ದರು.