ಕುಶಾಲನಗರ, ಅ. 29: ಕುಶಾಲನಗರ ನ್ಯಾಯಾಲಯದ ಆವರಣದಿಂದ ಸೋಮವಾರ ಸಂಜೆ ಪರಾರಿಯಾಗಿದ್ದ ಕೊಲೆ ಆರೋಪಿಯನ್ನು ಸಾರ್ವಜನಿಕರ ಸಹಕಾರದಿಂದ ಪೊಲೀಸರು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಯಡವನಾಡು ಬಳಿಯ ಸೂಳೆಬಾವಿ ಹಾಡಿ ನಿವಾಸಿ ರಾಮು ಮಹಿಳೆಯೊಬ್ಬರನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ. ಈತನನ್ನು ಬಂಧಿಸಿದ ಪೊಲೀಸರು ಸೋಮವಾರ ಸಂಜೆ ಕುಶಾಲನಗರ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆ ತಂದಿದ್ದರು. ಈ ಸಂದರ್ಭ ಮೂತ್ರ ವಿಸರ್ಜನೆ ನೆಪವೊಡ್ಡಿ ಶೌಚಾಲಯಕ್ಕೆ ತೆರಳಿದ ಆರೋಪಿ ಕೊಠಡಿಯ ವೆಂಟಿಲೇಟರ್ ಕಿಂಡಿ ಮೂಲಕ ನುಸುಳಿ ಕಟ್ಟಡದಿಂದ ಹಾರಿ ಓಡಿ ಪರಾರಿಯಾಗಿದ್ದ.ಈತನ ಬಗ್ಗೆ ಪತ್ತೆಗೆ ಕ್ರಮಕೈಗೊಂಡ ಪೊಲೀಸರಿಗೆ ಮಂಗಳವಾರ ಬೆಳಗ್ಗೆ ಕುಶಾಲನಗರ ತೆಪ್ಪದಕಂಡಿ ನಿವಾಸಿ ರಫೀಕ್ ಅವರ ಮೂಲಕ ಆರೋಪಿಯ ಸುಳಿವು ಲಭಿಸುತ್ತದೆ. ಪೊಲೀಸರ ಸೂಚನೆಯಂತೆ ಪೆಟ್ಟಿಗೆ ಅಂಗಡಿ ಬಳಿ ಟೀ ಕುಡಿಯುತ್ತ ನಿಂತಿದ್ದ ಆರೋಪಿಯ ಚಲನವಲನ ಗಮನಿಸಿ ಹಿಂಬಾಲಿಸಿದ ರಫೀಕ್ ಮತ್ತೊಬ್ಬರ ಸಹಾಯದಿಂದ ಆರೋಪಿಯನ್ನು ಹಿಡಿದು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಆರೋಪಿ ಪತ್ತೆಗೆ ಸಹಕರಿಸಿದ
(ಮೊದಲ ಪುಟದಿಂದ) ರಫೀಕ್ ನನ್ನು ಡಿವೈಎಸ್ಪಿ ಪಿ.ಕೆ.ಮುರಳೀಧರ್ ಅಭಿನಂದಿಸಿ ಗೌರವಿಸಿದರು. ಆರೋಪಿಗಳ ಪತ್ತೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಸಮರ್ಪಕ ಮಾಹಿತಿ ನೀಡಲು ಹಿಂಜರಿಯುವವರ ನಡುವೆ ಸಾಹಸ ತೋರಿದ ರಫೀಕ್ ಕಾರ್ಯವನ್ನು ಶ್ಲಾಘಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ರಫೀಕ್, ವಾಟ್ಸಾಪ್‍ಗಳಲ್ಲಿ ಹರಿದಾಡುತ್ತಿದ್ದ ಆರೋಪಿಯ ಭಾವಚಿತ್ರ ಆತನನ್ನು ಗುರುತು ಹಿಡಿಯಲು ಸಹಕರಿಸಿತು. ಪೊಲೀಸರ ನಿರ್ದೇಶನದಂತೆ ಆರೋಪಿಯನ್ನು ಕಟ್ಟಿಹಾಕಲಾಯಿತು ಎಂದರು. ಈ ಸಂದರ್ಭ ವೃತ್ತನಿರೀಕ್ಷಕ ಕುಮಾರ್ ಆರಾಧ್ಯ, ಠಾಣಾಧಿಕಾರಿ ನಂದೀಶ್ ಮತ್ತು ಸಿಬ್ಬಂದಿಗಳು ಇದ್ದರು.