ಮಡಿಕೇರಿ, ಅ. 30: ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎನಿಸಿ ಕೊಂಡಿದ್ದ ಜಿಲ್ಲೆಯ ರಂಗಸಮುದ್ರ ನಿವಾಸಿ, ಮಂಗಳೂರಿನಲ್ಲಿ ಡಿವೈಎಸ್ಪಿ ಆಗಿದ್ದ ಮಾದಪಂಡ ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ತನಿಖೆ ನಡೆಸಿದ ಸಿಐಡಿ ಅಧಿಕಾರಿ ಗಳು ಇಂದು ಒಟ್ಟು 262 ಪುಟಗಳಿರುವ ಸಮಗ್ರ ತನಿಖಾ ವರದಿಯನ್ನು ಜಿಲ್ಲೆಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವರದಿ ಸ್ವೀಕರಿಸಿರುವ ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.ಮಂಗಳೂರಿನ ಐಜಿ ಕಚೇರಿಯ ಇಲಾಖಾ ತನಿಖಾ ವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣಪತಿ ಅವರು ಕಳೆದ 2016ರ ಜುಲೈ 7 ರಂದು ಮಡಿಕೇರಿಯ ವಿನಾಯಕ ಲಾಡ್ಜ್‍ನ ಕೋಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಗಣಪತಿ ಅವರು ತಮಗಾಗಿರುವ ತೊಂದರೆ ಹಾಗೂ ಕಿರುಕುಳದ ಬಗ್ಗೆ ಖಾಸಗಿ ಚಾನಲ್‍ವೊಂದರ ಎದುರು ತೋಡಿಕೊಂಡಿದ್ದರು.
ಆತ್ಮಹತ್ಯೆಗೆ ಅಂದಿನ ಕಾಂಗ್ರೆಸ್ ಸರಕಾರದ ಗೃಹ ಸಚಿವ ಕೆ.ಜೆ. ಜಾರ್ಜ್ ಹಾಗೂ ಹಿರಿಯ ಅಧಿಕಾರಿಗಳಾದ ಪ್ರಣಮ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರುಗಳ ಹೆಸರುಗಳನ್ನು ಪ್ರಸ್ತಾಪಿಸಿದ್ದರು.ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಆಗ್ರಹಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ನಿರಂತರ ಪ್ರತಿಭಟನೆ ವ್ಯಕ್ತಗೊಂಡಿದ್ದವು. ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಪಡೆದು ಹಿರಿಯ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಹಾಗೂ ಪ್ರಸಾದ್ ಅವರನ್ನು ರಜೆಯ ಮೇಲೆ ಕಳುಹಿಸಿ ಸಿಓಡಿ ತನಿಖೆಗೆ ಒಳಪಡಿಸಿತ್ತು. ತನಿಖೆ ಮಾಡಿದ ಸಿಓಡಿ ತಂಡ ಗಣಪತಿ ಅವರು ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮೂವರಿಗೂ ಕ್ಲೀನ್ ಚೀಟ್ ನೀಡಲಾಯಿತು.
ನ್ಯಾಯಾಂಗ ತನಿಖೆಗೆ ಆಗ್ರಹ : ಸಿಓಡಿ ತನಿಖೆಯ ವರದಿ ಬಗ್ಗೆ ಅಸಮಾಧಾನಗೊಂಡ ಗಣಪತಿ ಅವರ ಸಂಬಂಧಿಕರು ಈ ಬಗ್ಗೆ ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯವು ನಿವೃತ್ತ ನ್ಯಾಯಾಧೀಶ ಕೇಶವ ನಾರಾಯಣ ಅವರ ಮುಖೇನ ವಿಚಾರಣೆಗೆ ಆದೇಶಿಸಿತು. ವಿಚಾರಣೆ ನಡೆಸಿದ ಕೇಶವ ನಾರಾಯಣ ನೇತೃತ್ವದ ಏಕಪೀಠ ಸದಸ್ಯ ಪೀಠ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ ರಾಜ್ಯ ಸರಕಾರ ವರದಿ ಬಗ್ಗೆ ಎಲ್ಲಿಯೂ ಬಹಿರಂಗಪಡಿಸಿಲ್ಲ. ಅಲ್ಲದೆ ಯಾವದೇ ಕ್ರಮಕೈಗೊಂಡಿಲ್ಲ.
ಈ ಹಿನ್ನೆಲೆಯಲ್ಲಿ ಗಣಪತಿ ಅವರ ಕುಟುಂಬಸ್ಥರು ಮತ್ತೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ರಾಜ್ಯ ಸರಕಾರ ಹಾಗೂ ಸಿಓಡಿ ತನಿಖೆಯಿಂದ ನ್ಯಾಯ ಸಿಗುತ್ತಿಲ್ಲ. ಹಾಗಾಗಿ ಚೆನ್ನೈ ಸಿಬಿಐ ತಂಡದಿಂದ ತನಿಖೆ ನಡೆಸುವಂತೆ ಕೋರಿದ್ದರು. ಇದಕ್ಕೆ ಸರ್ವೋಚ್ಚ ನ್ಯಾಯಾಲಯ ಸಮ್ಮತಿ ಸೂಚಿಸಿದ ಮೇರೆಗೆ ಚೆನ್ನೈನ ಸಿಬಿಐ ತಂಡ ತನಿಖೆ ಮುಂದುವರಿಸಿತ್ತು.
(ಮೊದಲ ಪುಟದಿಂದ)
ವರದಿ ಸಲ್ಲಿಕೆ : ಸಿಬಿಐ ತಂಡಕ್ಕೆ ಸರ್ವೋಚ್ಚ ನ್ಯಾಯಾಲಯ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗಡುವು ನೀಡಿತ್ತು. ಇದೀಗ ಸಿಬಿಐ ವಿಭಾಗ ಡಿವೈಎಸ್‍ಪಿ ರವಿ, ಸಿಬಿಐ ಸರಕಾರಿ ಅಭಿಯೋಜಕ ಸುಬೋಧ್ ಹಾಗೂ ಸಿಬ್ಬಂದಿಗಳು ಇಂದು ಜಿಲ್ಲೆಗೆ ವರದಿ ಸಹಿತ ಆಗಮಿಸಿದ್ದಾರೆ. ಇಲ್ಲಿನ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಕುಮಾರ್ ಅವರಿಗೆ 262 ಪುಟಗಳ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ವರದಿಯಲ್ಲಿಯೇನಿದೆ ಎಂಬದರ ಬಗ್ಗೆ ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಸಿಬಿಐ ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ತನಿಖೆಯ ವಿವರ ಮಾಹಿತಿ ಲಭ್ಯವಾಗಲಿದೆ.
ಓರ್ವ ದಕ್ಷ ಅಧಿಕಾರಿ ಸಾವಿಗೆ ಶರಣಾಗಿ ಮೂರು ವರುಷಗಳುರುಳಿದರೂ ಪ್ರಕರಣ ಇನ್ನೂ ಜೀವಂತವಾಗಿದೆ. ತನಿಖೆ ಮುಂದುವರಿದಿದೆ. ನ್ಯಾಯಪಾಲನೆ ನ್ಯಾಯದರ್ಶನದ ಬಗ್ಗೆ ಕಾದು ನೋಡಬೇಕಾಗಿದೆ.
ಪ್ರಕರಣದ ವಿವರ : ಮಂಗಳೂರಿನಲ್ಲಿ ಡಿವೈಎಸ್ಪಿ ಆಗಿದ್ದ ಮಾದಪಂಡ ಗಣಪತಿ ಎಂಬವರು 2016ರಂದು ಸಂಜೆ ಇಲ್ಲಿನ ಖಾಸಗಿ ಲಾಡ್ಜ್ ಒಂದರಲ್ಲಿ ನೇಣಿಗೆ ಶರಣಾಗಿದ್ದರು.
ಖಾಸಗಿ ವಾಹಿನಿ ಒಂದಕ್ಕೆ ಮಧ್ಯಾಹ್ನ ಸಂದರ್ಶನ ನೀಡಿದ ಅವರು ತನ್ನ ನೋವು ತೋಡಿಕೊಂಡು ತನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೆ ನೀಡಿದ್ದರು.
ಮಂಗಳೂರಿನ ಐಜಿ ಕಚೇರಿಯ ಇಲಾಖಾ ತನಿಖಾ ವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ‘ತನ್ನ ಜೀವಕ್ಕೆ ಅಪಾಯವಿದೆ. ತನಗೆ ಮಾನಸಿಕ ಕಿರುಕುಳ ಇದೆ ಎಂದು’ ಹೇಳಿದ್ದರು. ರಾಜ್ಯದ ಪ್ರಭಾವೀ ಸಚಿವ ಕೆ.ಜೆ. ಜಾರ್ಜ್‍ರಿಂದ ಮಾನಸಿಕವಾಗಿ ತನಗೆ ಕಿರುಕುಳವಾಗುತ್ತಿದೆ. ಇಲಾಖೆಗಾಗಿ ಪ್ರಾಣವನ್ನೇ ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸಿದ್ದೇನೆ. ಈಗ ನನ್ನ ಪ್ರಾಣಕ್ಕೆ ಸಂಚಕಾರ ಎದುರಾಗಿದೆ ಎಂದು ಗಣಪತಿ ಹೇಳಿಕೊಂಡಿದ್ದರು.
ಗಣಪತಿ ಮಂಗಳೂರು ಐಜಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿದ್ದು ಖಡಕ್ ಮತ್ತು ನಿಷ್ಠಾವಂತ ಅಧಿಕಾರಿಯೆಂದು ಖ್ಯಾತಿಗಳಿಸಿದ್ದರು. 2008ರ ಮಂಗಳೂರು ಚರ್ಚ್ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ತನಗೆ ಮಾನಸಿಕ ಹಿಂಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನ್ನನ್ನು ಇನ್ಸ್‍ಪೆಕ್ಟರ್ ಹುದ್ದೆಯಿಂದ ಸಸ್ಪೆಂಡ್ ಕೂಡ ಮಾಡಿ ದ್ವೇಷ ಸಾಧಿಸಿದ್ದರು ಎಂದು ದೂರಿರುವ ಗಣಪತಿ, ತನಗೆ 2008ರಲ್ಲಿ ಮಂಗಳೂರು ಐಜಿಯಾಗಿದ್ದ ಎಂ.ಎಸ್. ಪ್ರಸಾದ್ ಮತ್ತು ಬೆಂಗಳೂರಿನಲ್ಲಿ ಐಜಿಯಾಗಿದ್ದ ಪ್ರಣಬ್ ಮೊಹಾಂತಿ ಕೂಡ ಕಿರುಕುಳ ನೀಡುತ್ತಿದ್ದರು. ತನ್ನ ವಿರುದ್ಧ ನಕಲಿ ಎನ್ ಕೌಂಟರ್ ಕೇಸ್ ದಾಖಲಿಸಿ ಮಾನಸಿಕ ಹಿಂಸೆ ಮಾಡಲಾಗುತ್ತಿದೆ ಎಂದು ಗಣಪತಿ ಖಾಸಗಿ ವಾಹಿನಿ ಎದುರು ಅಳಲು ತೋಡಿಕೊಂಡಿದ್ದರು.
ಹಿರಿಯ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ವರ್ತಿಸದೇ, ಅವರು ಹೇಳಿದಾಗಲೆಲ್ಲಾ ಹಣ ರವಾನಿಸದ ತನ್ನನ್ನು ಮಾನಸಿಕವಾಗಿ ಪೊಲೀಸ್ ಇಲಾಖೆಯಲ್ಲಿ ಕುಗ್ಗಿಸುವ ಪ್ರಯತ್ನ ನಡೆದಿದೆ ಎಂದು ಗಣಪತಿ ಹೇಳಿದರು.
ಪೊಲೀಸ್ ಇಲಾಖೆ ಸೇರುವ ಮೊದಲು ಬೆಮೆಲ್‍ನಲ್ಲಿ ಉದ್ಯೋಗಿಯಾಗಿದ್ದ ಗಣಪತಿ, 1989ರಲ್ಲಿ ಎಸ್.ಐ. ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರು. ರಾಷ್ಟ್ರೀಯ ವಾಲಿಬಾಲ್ ಆಟಗಾರ ಕೂಡ ಆಗಿದ್ದ ಗಣಪತಿ ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ರಂಗಸಮುದ್ರ ನಿವಾಸಿ ಮಾದಪಂಡ ಕುಶಾಲಪ್ಪ ಅವರ ಪುತ್ರ, ಜನಸೇವೆಗೆಂದು ಪೊಲೀಸ್ ಇಲಾಖೆ ಸೇರಿದ್ದ ಎಂ.ಕೆ. ಗಣಪತಿ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದಿಂದ ಭ್ರಮನಿರಸನಗೊಂಡಿದ್ದಾರೆ. ತಾನೀಗ ಮಾಡಿರುವ ಗಂಭೀರ ಆರೋಪಗಳಿಗಾಗಿ ಪೊಲೀಸ್ ಇಲಾಖೆ, ಸರ್ಕಾರ ತನ್ನ ವಿರುದ್ಧ ಯಾವದೇ ಕ್ರಮ ಕೈಗೊಂಡರೂ ದಿಟ್ಟವಾಗಿ ಎದುರಿಸುತ್ತೇನೆ. ಆದರೆ ನಾನು ಹೇಳಿದ ಆರೋಪಗಳ ಬಗ್ಗೆ ಸರ್ಕಾರ ತನಿಖೆ ನಡೆಸಿ ಸತ್ಯಾಂಶ ಏನೆಂದು ಬಹಿರಂಗಪಡಿಸಲಿ ಎಂದು ಗಣಪತಿ ಸಾಯುವ ಕೆಲವು ಗಂಟೆಗಳ ಮೊದಲು ಸವಾಲು ಹಾಕಿದ್ದರು.
ಆರೋಪಗಳಿವು : ಎಷ್ಟೋ ಬಾರಿ ತನ್ನನ್ನು ಅನಗತ್ಯವಾಗಿ ವರ್ಗ ಮಾಡಿದರು. ಆದರೆ ಎಲ್ಲಿ ಡ್ಯೂಟಿ ಮಾಡಬೇಕು ಎಂಬದನ್ನು ತೋರಿಸದೆ ಹಿಂಸೆ ಕೊಟ್ಟರು. ಹಿರಿಯ ಅಧಿಕಾರಿಗಳನ್ನು ಕೇಳಿದಾಗ ಮೇಲಿನಿಂದ ಪ್ರೆಶರ್ ಇದೆ ಎನ್ನುತ್ತಿದ್ದರು. ಹಾಗಾಗಿ ಈ ಎಲ್ಲಾ ಘಟನೆಗಳಿಂದ ಬೇಸತ್ತಿದ್ದೇನೆ. ನನ್ನ ಜೀವಕ್ಕೆ ಏನಾದರು ಅಪಾಯವಾದರೆ ಅದಕ್ಕೆ ಈ ಐ.ಪಿ.ಎಸ್. ಅಧಿಕಾರಿಗಳು, ಸಚಿವ ಜಾರ್ಜ್ ಅವರೇ ಹೊಣೆಯಾಗುತ್ತಾರೆ. ಈಗಿನ ಸರ್ಕಾರದಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಖಂಡಿತಾ ಬೆಲೆಯಿಲ್ಲ ಎಂದು ಗಣಪತಿ ತನ್ನ ಮನದಾಳದ ನೋವು ತೋಡಿಕೊಂಡಿದ್ದರು.
ಕುಡೆಕಲ್ ಸಂತೋಷ್
ಚಿತ್ರ: ಮಾಹಿತಿ : ಹೆಚ್.ಎನ್. ಲಕ್ಷ್ಮೀಶ್