ಮಡಿಕೇರಿ, ಅ. 31 : ಬೇಂಗೂರು ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿರುವದನ್ನು ಖಂಡಿಸಿ ಸರ್ವ ಗ್ರಾಮಸ್ಥರು ಸಭೆಯನ್ನು ಮೂಂದೂಡಿದ ಘಟನೆ ನಡೆಯಿತು.
ಗ್ರಾಮಸಭೆಯನ್ನು ಇಂದು ಕರೆಯಲಾಗಿತ್ತಾದರೂ ಸಭೆಗೆ ಇಂಜಿನಿಯರಿಂಗ್ ವಿಭಾಗದ ಯಾವ ಅಧಿಕಾರಿಯೂ ಬಂದಿರಲಿಲ್ಲ. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.
ಗ್ರಾ.ಪಂ ಅಧ್ಯಕ್ಷÀ ಕೆ.ಬಿ.ಅಶೋಕ್ ಅವರು ಇಂಜಿನಿಯರ್ ಗವಿ ಸಿದ್ದಯ್ಯ ಅವರನ್ನು ಸಂಪರ್ಕಿಸಿದಾಗ ಮಡಿಕೇರಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅವರ ಆದೇಶದ ಮೇರೆಗೆ ಕೆ. ನಿಡುಗಣೆ ಗ್ರಾಮ ಪಂಚಾಯ್ತಿಯ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ತೆರಳಿರುವದಾಗಿ ಮಾಹಿತಿ ನೀಡಿದರು.
ಅಧ್ಯಕ್ಷರು ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳನ್ನು ಸಂಪರ್ಕಿಸಿದಾಗ ಉದ್ಧಟತನದ ಉತ್ತರ ಬಂದಿದೆ ಎಂದು ಆರೋಪಿಸಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ 8 ದಿನಗಳೊಳಗೆ ಮತ್ತೊಮ್ಮೆ ನಡೆಯುವ ಗ್ರಾಮಸಭೆಗೆ ಎಲ್ಲಾ ಅಧಿಕಾರಿಗಳು ಬಾರದಿದ್ದಲ್ಲಿ ಚೇರಂಬಾಣೆಯಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.