ಕುಶಾಲನಗರ, ಅ. 26: ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಕುಶಾಲನಗರ ಪಟ್ಟಣದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಅಳವಡಿಸಿದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಸ್ಥಗಿತಗೊಂಡು ಇಲಾಖೆಯ ಯೋಜನೆಯೊಂದು ವೈಫಲ್ಯತೆ ಕಂಡಿದೆ. ಒಂದು ವರ್ಷದ ಹಿಂದೆ ಪಟ್ಟಣದಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆಗೆಂದು ಸಿಗ್ನಲ್ ದೀಪಗಳ ಅಳವಡಿಕೆಯಾದರೂ ಕೇವಲ ಕೆಲವೇ ದಿನಗಳು ಮಾತ್ರ ಚಾಲನೆಗೊಂಡು ಇದೀಗ ಮತ್ತೆ ಮಾನವ ಚಾಲಿತ ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ಇಲಾಖೆ ಸಿಬ್ಬಂದಿಗಳು ತೊಡಗಿಸಿ ಕೊಂಡಿರುವದು ಕಾಣಬಹುದು.ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಮೂಲಕ ಜಿಲ್ಲೆಗೆ ಬಂದುಹೋಗುವ ಸಾವಿರಾರು ಸಂಖ್ಯೆಯ ವಾಹನಗಳ ನಿಯಂತ್ರಣಕ್ಕೆ ಸಂಚಾರಿ ಪೊಲೀಸ್ ಇಲಾಖೆ ಕುಶಾಲನಗರದ ಹೃದಯ ಭಾಗವಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಅಂದಾಜು ರೂ. 8 ಲಕ್ಷಗಳ ವೆಚ್ಚದಲ್ಲಿ ಈ ವ್ಯವಸ್ಥೆ ಕಲ್ಪಿಸಿತ್ತು.ಮೈಸೂರು ಭಾಗದಿಂದ ಬರುವ ಹಾಗೂ ಮಡಿಕೇರಿ, ಹಾಸನ ಕಡೆಗೆ ಸಾಗುವ ವಾಹನಗಳ ನಿಯಂತ್ರಣ ಮಾಡುವ ಹಿನೆÀ್ನಲೆಯಲ್ಲಿ ಸಂಚಾರಿ ವೃತ್ತದಲ್ಲಿ ಸಂಪರ್ಕ ಕಲ್ಪಿಸುವ 5 ರಸ್ತೆಗಳಲ್ಲಿ ಸ್ವಯಂ ಚಾಲಿತ ಸಿಗ್ನಲ್ ದೀಪಗಳ ಪೋಲ್ಗಳು ಅಳವಡಿಸಿ ಪ್ರಾಯೋಗಿಕ ಪರೀಕ್ಷೆ ಕೂಡ ನಡೆಸಲಾಗಿತ್ತು.
ಕೊಡಗು ಜಿಲ್ಲೆಗೆ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಸಾವಿರಾರು
(ಮೊದಲ ಪುಟದಿಂದ) ಮಂದಿ ಪ್ರವಾಸಿಗರು ಲಗ್ಗೆಯಿಡುತ್ತಾರೆ. ಅಂದಾಜು ದಿನವೊಂದಕ್ಕೆ ಕುಶಾಲನಗರ ಮೂಲಕ 25 ಸಾವಿರಕ್ಕೂ ಅಧಿಕ ವಾಹನಗಳು ಹಾದು ಹೋಗುತ್ತಿವೆ. ಕುಶಾಲನಗರ ಪಟ್ಟಣದಲ್ಲಿ ವಾಹನಗಳ ಸುಗಮ ಸಂಚಾರ, ವ್ಯವಸ್ಥಿತ ಪಾರ್ಕಿಂಗ್ ಸಮಸ್ಯೆಗಳು ಬಹುವಾಗಿ ಕಾಡಲು ಆರಂಭಿಸಿದೆ. ಈ ಮೂಲಕ ಪಟ್ಟಣದ ಜನತೆಗೆ ದೈನಂದಿನ ಓಡಾಟಕ್ಕೆ ಭಾರೀ ಸಮಸ್ಯೆ ಉಂಟಾಗಿದೆ ಎಂಬದು ಸಾರ್ವಜನಿಕರ ಆರೋಪವಾಗಿದೆ.
ಸಂಪೂರ್ಣ ಸ್ವಯಂ ಚಾಲಿತ ವ್ಯವಸ್ಥೆ ಹೊಂದಿರುವ ಸಿಗ್ನಲ್ ಲೈಟ್ಗಳು ಸೋಲಾರ್, ವಿದ್ಯುತ್ ಮತ್ತು ಬ್ಯಾಟರಿ ಚಾಲಿತವಾಗುವ ದರೊಂದಿಗೆ ಕೆಲವು ದಿನಗಳ ಕಾಲ ಕಾರ್ಯನಿರ್ವಹಿಸಿದವು. ಮೈಸೂರು, ಮಡಿಕೇರಿ, ಹಾಸನ ಕಡೆಗೆ ತೆರಳುವ ರಸ್ತೆಗಳು ಸೇರಿದಂತೆ ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಪ್ರವಾಸಿ ಮಂದಿರ ಕಡೆಗೆ ತೆರಳುವ ಮಾರ್ಗದಲ್ಲಿ ಸಿಗ್ನಲ್ ದೀಪಗಳುಳ್ಳ 8 ಪೋಲ್ಗಳನ್ನು ಅಳವಡಿಸಿ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಬಹುತೇಕ ಅವೈಜ್ಞಾನಿಕ ರೀತಿಯಲ್ಲಿದ್ದು ಸುತ್ತಲೂ ಅಂಗಡಿ ಮುಂಗಟ್ಟುಗಳ ವರ್ತಕರು ಗ್ರಾಹಕರು ತಮ್ಮ ವಾಹನಗಳನ್ನು ನಿಲುಗಡೆಗೊಳಿಸುವ ಮೂಲಕ ನಿಯಮ ಪಾಲಿಸದೆ ಇರುವದು ಈ ಸಿಗ್ನಲ್ ಲೈಟ್ ವ್ಯವಸ್ಥೆಗೆ ಒಂದು ರೀತಿಯ ಅನಾನುಕೂಲ ಕಲ್ಪಿಸಿದರೆ ಇನ್ನೊಂದೆಡೆ ವಾಹನಗಳ ಒತ್ತಡದ ಹಿನೆÀ್ನಲೆಯಲ್ಲಿ ಸಿಗ್ನಲ್ ತೆರವುಗೊಳ್ಳುವ ಸಂದರ್ಭ ನೂರಾರು ವಾಹನಗಳು ಸಾಲಾಗಿ ನಿಂತು ಇಡೀ ಸಂಚಾರ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿರುವದು ಕಂಡುಬಂದಿತ್ತು ಎನ್ನುತ್ತಾರೆ ಸ್ಥಳೀಯ ಪೊಲೀಸ್ ಅಧಿಕಾರಿಗಳು.
ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಪಟ್ಟಣದಲ್ಲಿ ಸುಮಾರು ರೂ.25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಪಾದಚಾರಿಗಳ ಓಡಾಟಕ್ಕೆ ನಿರ್ಮಾಣವಾದ ರಸ್ತೆ ಬಹುತೇಕ ವರ್ತಕರಿಂದ ಮತ್ತು ಬೀದಿ ಬದಿ ವ್ಯಾಪಾರಿಗಳಿಂದ ಒತ್ತುವರಿಯಾಗಿದ್ದು, ಪಾದಚಾರಿಗಳ ಓಡಾಟಕ್ಕೆ ಕಷ್ಟ ಉಂಟಾಗಿದೆ ಎನ್ನುವ ಅಳಲು ಕೇಳಿಬಂದಿದೆ. ದೈನಂದಿನ ಕೆಲಸ ಕಾರ್ಯಗಳಿಗೆ ಓಡಾಡುವ ಜನರು ಮತ್ತು ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ವಾಹನಗಳ ನಡುವೆ ಓಡಾಡಬೇಕಾದ ಸ್ಥಿತಿ ಸೃಷ್ಟಿಯಾಗಿದ್ದು ಅಪಾಯವನ್ನು ಆಹ್ವಾನಿಸುವಂತಾಗಿದೆ.
ಕುಶಾಲನಗರ ಸರಕಾರಿ ಶಾಲೆ ಎದುರುಗಡೆ ಪಾದಚಾರಿಗಳಿಗೆ ನಿರ್ಮಿಸಿದ ರಸ್ತೆಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ತೆರವುಗೊಳಿಸದೆ ಸೆಸ್ಕ್ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಶಾಲೆಯ ಪ್ರಮುಖರು ಆರೋಪಿಸಿದ್ದಾರೆ. ಇನ್ನೊಂದೆಡೆ ಪಟ್ಟಣದಲ್ಲಿರುವ ಕೆಲವು ವಸತಿಗೃಹಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗರ ಮತ್ತು ಗ್ರಾಹಕರ ಬಸ್ಗಳು, ವಾಹನಗಳನ್ನು ನಿಲುಗಡೆ ಗೊಳಿಸುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದ್ದು, ಇದರಿಂದ ಪಟ್ಟಣದ ಸಂಚಾರ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಪಟ್ಟಣದ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಲ್ಲಿ ಸಂಬಂಧಿಸಿದ ಇಲಾಖೆ ಗಳು ವಿಶೇಷ ಕಾರ್ಯಯೋಜನೆ ರೂಪಿಸಬೇಕಾಗಿದೆ.