ಮಡಿಕೇರಿ, ಅ. 30: ಬರಪೊಳೆ ಯಲ್ಲಿ ರಿವರ್ ರ್ಯಾಫ್ಟಿಂಗ್ ಸಂಬಂಧ ಮೇಲುಸ್ತುವಾರಿ ಸಮಿತಿ ವಿಧಿಸಿರುವ ದರ ಹೊರತುಪಡಿಸಿ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ಒಂದು ವೇಳೆ ಗೈಡ್‍ಗಳು ನಿಯಮ ಉಲ್ಲಂಘಿಸಿ ಹೆಚ್ಚಿನ ಶುಲ್ಕ ಪಡೆದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಎಚ್ಚರಿಕೆಯಿತ್ತರು. ರಿವರ್ ರ್ಯಾಫ್ಟಿಂಗ್ ಮೇಲು ಸ್ತುವಾರಿ ಮತ್ತು ನಿರ್ವಹಣಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ರಿವರ್ ರ್ಯಾಫ್ಟ್ಟಿಂಗ್ ಮೇಲುಸ್ತುವಾರಿ ಮತ್ತು ನಿರ್ವಹಣೆ ಸಂಬಂಧ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ಮುಂದಿನ ವರ್ಷದಿಂದ ಕೇವಲ 60 ರ್ಯಾಫ್ಟ್‍ಗಳಿಗೆ ಅವಕಾಶ ನೀಡುವದು ಹಾಗೂ ಈ ವರ್ಷ ಬಂದಂತಹ ಅರ್ಜಿಗಳನ್ನು ಪರಿಶೀಲಿಸಿ ತಾಂತ್ರಿಕ ಸಮಿತಿಯ ನಿರ್ಣಯದಂತೆ ಮುಂದುವರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈಗಾಗಲೇ ರಿವರ್ ರ್ಯಾಫ್ಟಿಂಗ್ ನಡೆಸಲು ಪರವಾನಗಿ ಪಡೆದಿರುವವರ ರಿವರ್ ರ್ಯಾಪ್ಟರ್‍ಗಳನ್ನು ಪರಿಶೀಲನೆ ನಡೆಸಲು ಲೋಕೋಪಯೋಗಿ, ಅಗ್ನಿ ಶಾಮಕ ದಳ, ಪ್ರವಾಸೋದ್ಯಮ ಇಲಾಖೆ ಮತ್ತು ಸಮಿತಿ ಸದಸ್ಯರುಗಳು ಒಂದು ದಿನ ಖುದ್ದು ಭೇಟಿ ನೀಡು ವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ರಿವರ್ ರ್ಯಾಫ್ಟಿಂಗ್ ಸಮಿತಿ ಸದಸ್ಯರು, ಹಾಲಿ ಕಾರ್ಯನಿರ್ವ ಹಿಸುತ್ತಿರುವ ರಿವರ್ ರ್ಯಾಪ್ಟಿಂಗ್ ಸದಸ್ಯರುಗಳಿಗೆ ಪಿಟ್‍ನೆಸ್ ಸರ್ಟಿಫಿಕೇಟ್ ವಿತರಿಸಿರುವ ಬಗ್ಗೆ ಆಕ್ಷೇಪಣೆಗಳು ಕೇಳಿ ಬಂದವು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಂದಿನ ವರ್ಷದಿಂದ ಅರ್ಜಿ ಹಾಕಿದ ಸದಸ್ಯರುಗಳಿಗೆ ಫಿಟ್‍ನೆಸ್ ಸರ್ಟಿಫಿಕೇಟ್ ನೀಡಲು ಒಂದೇ ದಿನ ಅರ್ಜಿ ಪರಿಶೀಲಿಸಿ ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
(ಮೊದಲ ಪುಟದಿಂದ) ರ್ಯಾಫ್ಟಿಂಗ್ ನಿಯಮಗಳ ಬಗ್ಗೆ ಪತ್ರಿಕಾ ಪ್ರಕಟಣೆ ನೀಡುವದು ಹಾಗೂ ಅಗತ್ಯವಿರುವ ಮಾನದಂಡಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪ್ರಚಾರ ಪಡಿಸಲು ಕ್ರಮಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಮಾತನಾಡಿ ಬರಪೊಳೆಯಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ದುಬಾರೆಯಲ್ಲಿಯೂ ಕೂಡ ಅಳವಡಿಸಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಲೋಕೋಪಯೋಗಿ ಇಲಾಖೆಯ ಇಇ ಇಬ್ರಾಹಿಂ, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಪಿ.ಚಂದನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ವಿವಿಧ ಇಲಾಖೆಯ ಅಧಿಕಾರಿಗಳು, ರಿವರ್ ರ್ಯಾಫ್ಟಿಂಗ್ ಸಮಿತಿ ಸದಸ್ಯರಾದ ರತೀಶ್, ವಿಶ್ವ ಮತ್ತು ಮಂಜುನಾಥ್ ಅವರು ಹಲವು ಮಾಹಿತಿ ನೀಡಿದರು.