ಕಣಿವೆ, ಅ. 30: ಮೈಸೂರು ಬಂಟ್ವಾಳ ರಾಜ್ಯ ಹೆದ್ದಾರಿಯ ಗುಡ್ಡೆಹೊಸೂರು, ದುಬಾರೆ ಹಾಗೂ ಆನೆಕಾಡು ವ್ಯಾಪ್ತಿಯ ರಸ್ತೆಗಳ ಎರಡೂ ಕಡೆಗಳಲ್ಲಿ ಬೀಡಾಡಿ ದನಗಳಿಂದಾಗಿ ಅಪಘಾತ ಹಾಗೂ ಅವಘಡಗಳು ಹೆಚ್ಚುತ್ತಲೇ ಇವೆ. ಒಂದೆಡೆ ವಾಹನಗಳಿಗೆ ಅಡ್ಡಲಾಗಿ ನುಗ್ಗುವ ಹಸುಗಳಿಂದ ವಾಹನಗಳಿಗೂ ಮತ್ತು ವಾಹನಗಳಲ್ಲಿ ಪಯಣಿಸುವ ಮಂದಿಗೂ ತೊಂದರೆಯಾದರೆ, ಮತ್ತೊಂದೆಡೆ ವೇಗವಾಗಿ ಧಾವಿಸುವ ವಾಹನಗಳು ಡಿಕ್ಕಿಯಾಗಿ ಏನೂ ಅರಿಯದ ಮುಗ್ಧ ಜೀವಿಗಳು ನೋವುಣ್ಣುತ್ತಿವೆ. ಬೀಡಾಡಿ ದನಗಳನ್ನು ಹೆದ್ದಾರಿಗೆ ಬಿಡದಂತೆ ಅಗತ್ಯ ಕ್ರಮಕ್ಕೆ ಸಂಬಂಧಿಸಿದವರು ಮುಂದಾಗಬೇಕಿದೆಯಾದರೂ ಈ ಬಗ್ಗೆ ಸಂಬಂಧಿಸಿದ ಸ್ಥಳೀಯ ಪ್ರಾಧಿಕಾರಗಳು ಎಚ್ಚರ ವಹಿಸದ ಕಾರಣ ಬೀಡಾಡಿ ದನಗಳಿಂದಾಗಿ ಅಪಾರ ಜೀವಹಾನಿ, ದೇಹಹಾನಿ ಹಾಗೂ ವಾಹನಗಳ ಹಾನಿ ನಡೆಯುತ್ತಲೇ ಇದೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬಸವನಹಳ್ಳಿ, ಆನೆಕಾಡು, ಗುಡ್ಡೆಹೊಸೂರು, ಬೊಳ್ಳೂರು, ಬೆಟ್ಟಗೇರಿ ಭಾಗದ ಕೆಲವು ರೈತರು ತಾವು ಸಾಕಿರುವ ಜಾನುವಾರುಗಳನ್ನು ಮನೆಯಲ್ಲಿ ಕಟ್ಟದೇ ಮೇವು ತಿನ್ನಲು ಆನೆಕಾಡು ಅರಣ್ಯದ ಕಡೆ ಅಟ್ಟುತ್ತಿದ್ದಾರೆ. ಇದಕ್ಕೆ ಮೊದಲು ಕಡಿವಾಣ ಬೀಳಬೇಕಿದೆ. ರಾಜ್ಯದ ಪ್ರವಾಸಿ ಭೂಪಟದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಾದ ಅಬ್ಬಿಫಾಲ್ಸ್, ರಾಜಾಸೀಟ್, ಮಾಂದಲಪಟ್ಟಿ, ತಲಕಾವೇರಿ, ಭಾಗಮಂಡಲ, ದುಬಾರೆ, ಇರ್ಪುಫಾಲ್ಸ್ ಮೊದಲಾದ ಸ್ಥಳಗಳಿಗೆ ತೆರಳಲು ದೂರದ ಪ್ರದೇಶಗಳಿಂದ ಧಾವಿಸುವ ಪ್ರವಾಸಿಗರು ಕುಶಾಲನಗರಕ್ಕೆ ಆಗಮಿಸಿ ಗುಡ್ಡೆಹೊಸೂರು ಮೂಲಕವೇ ತೆರಳಬೇಕಿದೆ.
ಪ್ರತಿ ದಿನ ಮುಂಜಾನೆಯಿಂದ ಮುಸ್ಸಂಜೆಯವರೆಗೂ ಸಾವಿರಾರು ಸಂಖ್ಯೆಯಲ್ಲಿ ಧಾವಿಸುವ ಪ್ರವಾಸಿ ವಾಹನಗಳನ್ನು ಈ ಜಾನುವಾರು ಗಳು ಹೆದ್ದಾರಿಯ ಮಧ್ಯೆಯಲ್ಲಿಯೇ ತಡೆಯುತ್ತವೆ.
ಒಂದಲ್ಲ - ಎರಡಲ್ಲ, ನೂರಾರು ಸಂಖ್ಯೆಯಲ್ಲಿ ಈ ಹೆದ್ದಾರಿಯಲ್ಲಿ ಕಾಣಸಿಗುವ ಬೀಡಾಡಿ ದನಗಳು ಹಿಂಡು-ಹಿಂಡಾಗಿ ಹೆದ್ದಾರಿ ನಡುವೆಯೇ ಅಡ್ಡಾಡುತ್ತಾ ವೇಗವಾಗಿ ತೆರಳುವ ವಾಹನಗಳಿಗೆ ಅಡ್ಡ ಹೋಗಿ ಅವಘಡಗಳಿಗೆ ಕಾರಣವಾಗುತ್ತಿವೆ. ಇಂತಹ ಅವಘಡಗಳಿಂದಾಗಿ ಪ್ರವಾಸಿ ವಾಹನಗಳು ಜಖಂ ಗೊಳ್ಳುವ ದಲ್ಲದೇ ವಾಹನಗಳಲ್ಲಿ ಪ್ರಯಾಣಿಸುವ ಅಮೂಲ್ಯ ಜೀವಗಳಿಗೂ ಘಾಸಿ ಯಾಗುತ್ತಿದೆ. ಅಪಘಾತಕ್ಕೆ ಕಾರಣ ವಾಗುವ ಬೀಡಾಡಿ ದನಗಳ ಪಾಲಕರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಸ್ಥಳೀಯ ಪಂಚಾಯಿತಿ ಮಾಡಬೇಕಿದೆ. ಇನ್ನು ಮುಂದೆ ಬೀಡಾಡಿ ದನಗಳ ಪಾಲಕರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡುವ ಕುರಿತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀರ್ಮಾನಿಸಬೇಕಿದೆ. ಅಲ್ಲದೇ ಪ್ರಯಾಣಿಕರ ಸುಗಮ ಸಂಚಾರದ ಹೊಣೆ ಇರುವ ಕುಶಾಲನಗರ ಸಂಚಾರಿ ಪೊಲೀಸರ ನೆರವು ಪಡೆದು ಹೆದ್ದಾರಿಯಲ್ಲಿ ಅಡ್ಡಾಡುವ ಯಾವದೇ ಹಸುಗಳನ್ನು ಮುಲಾಜಿಲ್ಲದೇ ಹಿಡಿದು ಆ ಹಸುವಿನ ಪಾಲಕರಿಗೆ ದಂಡ ವಿಧಿಸುವ ಬಗ್ಗೆ ಚಿಂತನೆ ಮಾಡಬೇಕಿದೆ. ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನಗಳ ಚಾಲಕರು ಮತ್ತೊಂದು ವಾಹನವನ್ನು ಹಿಂದಿಕ್ಕಿ ಮುಂದೆ ಸಾಗುವ ಭರದಲ್ಲಿ ರಸ್ತೆ ಬದಿಯಲ್ಲಿ ಮಲಗುವ ಕಪ್ಪು ವರ್ಣದ ಹಸುಗಳ ಮೇಲೆಯೂ ಹರಿಸಿ ಹಸುಗಳ ಕಾಲುಗಳು, ಬಾಲ ಮತ್ತು ಹಸುವಿನ ತಲೆಯ ಭಾಗಕ್ಕೆ ಹಾನಿಯಾಗಿ ಅದರಿಂದ ಸಂಭವಿಸುವ ನರಕಯಾತನೆಯಿಂದ ರಸ್ತೆಯಲ್ಲೇ ಹಸು ಕರುಗಳು ಸಾವನ್ನಪ್ಪಿ ಕೊಳೆತು ನಾರಿದರೂ ಕೂಡ ಕನಿಕರ ತೋರಿಸದ ಗೋ- ಪಾಲಕರೂ ಇದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಅರಣ್ಯದೊಳಗೆ ಮೇಯಲು ಬಿಡುವ ದನಗಳ ಪಾಲಕರ ವಿರುದ್ಧ ಕ್ರಮ ಜರುಗಿಸಬೇಕಿದೆ. ಆನೆ ಕಾಡು ವ್ಯಾಪ್ತಿಯಲ್ಲಿ ಪಶುಪಾಲನಾ ಇಲಾಖೆಯ ಅಂಕಿ-ಅಂಶದನ್ವಯ 750 ಹಸುಗಳಿವೆ. ಅವುಗಳ ಕಿವಿಗಳಿಗೆ ಕಾಲರ್ ಅಳವಡಿಸಲಾಗಿದೆ. ಕೆಲವರು ಗೌರವಯುತವಾಗಿ ತಮ್ಮ ಜಮೀನು ಗಳಲ್ಲಿ ಮೇಯಿಸಿ ಮನೆಯಂಗಳದಲ್ಲಿ ಕಟ್ಟಿ ಹೈನುಗಾರಿಕೆ ಮಾಡುವವರೂ ಇದ್ದಾರೆ.
ಕಾಡಾನೆಗಳು ಹುಲ್ಲು, ಸೊಪ್ಪು ಮೇಯುವ ಜಾಗದಲ್ಲಿ ಹಸುಗಳನ್ನು ಮೇಯಿಸಲು ಓಡಿಸುವವರು ಕಾಡಾನೆಗಳ ಕುರಿತೂ ಒಂದಷ್ಟು ಚಿಂತಿಸಬೇಕು.
ಕಾಡಾನೆಗಳು ಇವರ ತೋಟ, ಹೊಲ-ಗದ್ದೆಗಳಿಗೆ ಲಗ್ಗೆ ಇಟ್ಟು ಬೆಳೆ ತಿಂದರೆ ಅಯ್ಯೋ ಎಲ್ಲವೂ ಹೋಯಿತು. ಕಾಡಾನೆಗಳ ಪಾಲಾಯಿತು. ಪರಿಹಾರ ಕೊಡಿ ಎಂದು ಬೊಬ್ಬಿಡುವ ಜನ ತಮ್ಮ ಜವಾಬ್ದಾರಿಯನ್ನು ಕೂಡ ಅರಿಯಬೇಕಿದೆ.
ಸಂಚಾರಿ ಪೊಲೀಸರು, ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯತಿ ಈ ಮೂವರು ಸೇರಿ ಗಂಭೀರವಾಗಿ ಚಿಂತನೆ ನಡೆಸಬೇಕಿದೆ. ದಶಕಗ ಳಿಂದಲೂ ಕಾಡುತ್ತಿರುವ ಬೀಡಾಡಿ ದನಗಳ ಹಾವಳಿ ಕೊನೆಗಾಣಿಸಿ ಈ ಹೆದ್ದಾರಿಯ ಸುಗಮ ಸಂಚಾರಕ್ಕೆ ಮುನ್ನುಡಿ ಬರೆಯಬೇಕಿದೆ.
-ಕೆ.ಎಸ್. ಮೂರ್ತಿ