ನವದೆಹಲಿ, ಅ. 30: ಕೊಡಗಿನ ‘ಕೂರ್ಗ್ ಬೈರೇಸ್’ ಹಾಗೂ ಜಮ್ಮಾ ಕೋವಿ ಹಕ್ಕಿನ ಬಗ್ಗೆ ಕೆಲವು ವ್ಯಕ್ತಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಿ ಮಟ್ಟದಲ್ಲಿ ಗೊಂದಲವೆಬ್ಬಿಸಿ ತಪ್ಪು ಮಾಹಿತಿ ನೀಡಿ ಈ ಹಕ್ಕಿನ ರದ್ಧತಿಗೆ ಪ್ರಯತ್ನ ನಡೆಸಿದ್ದರು. ಇದರ ವಿರುದ್ಧ ಕೊಡಗು, ಬೆಂಗಳೂರು ಮತ್ತು ನವದೆಹಲಿಯಲ್ಲಿರುವ ಪ್ರಮುಖರು ಕೇಂದ್ರ ಗೃಹಖಾತೆಗೆ ಅಧಿಕೃತ ದಾಖಲಾತಿಗಳ ಮೂಲಕ ಮನದಟ್ಟು ಮಾಡಿ ಜಮ್ಮಾ ಕೋವಿ ಹಕ್ಕನ್ನು ಮುಂದುವರಿಸುವಂತೆ ಮನವಿ ಮಾಡಿದ್ದರು. ಇದೀಗ ಕೇಂದ್ರ ಗೃಹ ಸಚಿವಾಲಯವು ತಾ. 29 ರಂದು ಅಧಿಕೃತ ಗೆಜೆಟ್ ಪ್ರಕಟಣೆ ಮೂಲಕ ಆದೇಶ ಹೊರಡಿಸಿ ಕೊಡಗಿನ ‘ಕೂರ್ಗ್ ಬೈರೇಸ್’ ಜಮ್ಮಾ ಕೋವಿ ಹಕ್ಕನ್ನು 2029ರ ಅಕ್ಟೋಬರ್ 31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಎಸ್.ಸಿ.ಎಲ್. ದಾಸ್ ಈ ಆದೇಶ ಹೊರಡಿಸಿದ್ದಾರೆ.
ಈ ಕುರಿತಾಗಿ ಬೆಂಗಳೂರು ಕೊಡವ ಸಮಾಜದ ಕಾನೂನು ಸಲಹೆಗಾರರಾದ ಐತಿಚಂಡ ಎಂ. ದೇವಯ್ಯ ಮತ್ತು ಅವರ ಸಹಾಯಕರು ಕೇಂದ್ರ ಗೃಹ ಇಲಾಖೆಗೆ ಸಮರ್ಥನೀಯ, ಸಮರ್ಪಕ ದಾಖಲಾತಿಗಳನ್ನು ಒದಗಿಸಿ ಜಮ್ಮಾ ಕೋವಿ ಹಕ್ಕನ್ನು ಮುಂದುವರಿಸುವಂತೆ ಮನವಿ ಮಾಡಿದ್ದರು. ಅವರಿಗೆ ಬೆಂಗಳೂರು ಕೊಡವ ಸಮಾಜ, ವೀರಾಜಪೇಟೆಯ ಅಖಿಲ ಕೊಡವ ಸಮಾಜ, ಕೊಡವ ಸಮಾಜಗಳ ಒಕ್ಕೂಟಗಳಿಂದಲೂ ಬೆಂಬಲ ನೀಡಲಾಗಿತ್ತು. ನವದೆಹಲಿಯಲ್ಲಿರುವ ಕೊಡವ ಪ್ರಮುಖರುಗಳಾದ ಮಾಚಿಮಂಡ ತಮ್ಮು ಕಾರ್ಯಪ್ಪ,
(ಮೊದಲ ಪುಟದಿಂದ) ಮನೆಯಪಂಡ ಪವನ್ ಗಣಪತಿ, ಪಾಲೆಕಂಡ ನಂಜು ನಂಜಪ್ಪ ಹಾಗೂ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಇವರುಗಳು ಸಹಕರಿಸಿದ್ದರು. ನೂತನ ಗೆಜೆಟ್ ಪ್ರಕಟಣೆಯಲ್ಲಿನ ಮಾಹಿತಿ ಈ ಕೆಳಗಿನಂತಿದೆ.
1959ರ ಶಸ್ತ್ರಾಸ್ತ್ರ ಕಾಯ್ದೆಯಲ್ಲಿನ ಕೆಲವೊಂದು ಸವಲತ್ತಿನ ಅನ್ವಯ ‘ಕೂರ್ಗ್ ಬೈರೇಸ್’ ಮತ್ತು ಜಮ್ಮಾ ಕೋವಿ ಹಕ್ಕನ್ನು ಪ್ರತಿಪಾದಿಸಲಾಗಿದೆ. ಇದುವರೆಗೂ ಕೊಡಗಿನ ಈ ಹಕ್ಕುದಾರರು ಅನುಭವಿಸಿಕೊಂಡು ಬಂದಿರುವ ಕೋವಿಯ ಮೇಲಿನ ಹಕ್ಕನ್ನು 2029ರ ಅಕ್ಟೋಬರ್ 31 ರವರೆಗೆ ವಿಸ್ತರಿಸುವದು. ‘ಕೂರ್ಗ್ ಬೈರೇಸ್’ ವರ್ಗಕ್ಕೆ ಒಳಪಟ್ಟ ಪ್ರತಿಯೊಬ್ಬ ವ್ಯಕ್ತಿ ಮತ್ತು ಕೊಡಗಿನ ಪ್ರತಿಯೊಬ್ಬ ಜಮ್ಮಾ ಭೂ ಹಿಡುವಳಿದಾರರು ಈ ಸವಲತ್ತಿಗೆ ಒಳಪಡುತ್ತಾರೆ.