ಮಡಿಕೇರಿ, ಅ. 29: ಜಾತ್ಯತೀತ ಜನತಾದಳವನ್ನು ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಬಲಿಷ್ಠಗೊಳಿಸುವ ಮತ್ತು ಸಂಘಟಿಸುವ ಉದ್ದೇಶದಿಂದ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ನ. 1 ರಂದು ಚಾಲನೆ ನೀಡಲಾಗುವದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಡ್ಲಿಪೇಟೆಯ ಶ್ರೀಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸದಸ್ಯತ್ವ ಅಭಿಯಾನದ ಪಾದಯಾತ್ರೆಯನ್ನು ಆರಂಭಿಸಲಾಗುವದು ಎಂದರು.
ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಗುಂಪು ಅಭಿಯಾನದ ಯಶಸ್ಸಿಗೆ ಕೈ ಜೋಡಿಸಲಿದೆ. ಮನೆ ಮನೆಗೆ ತೆರಳಿ ಸದಸ್ಯರನ್ನು ಆಯ್ಕೆ ಮಾಡುವದಲ್ಲದೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು 14 ತಿಂಗಳ ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವದು ಎಂದು ಗಣೇಶ್ ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗಣೇಶ್, ಕಾಂಗ್ರೆಸ್ ಪಕ್ಷ ಹೇಳಿಕೆಗಳನ್ನು ತಿರುಚುವದರಲ್ಲಿ ಮತ್ತು ಸುಳ್ಳನ್ನು ಸತ್ಯ ಮಾಡುವದರಲ್ಲಿ ಹೆಸರುವಾಸಿಯಾಗಿದೆ ಎಂದು ಕುಟುಕಿದರು. ಜೆಡಿಎಸ್ ಅಲ್ಪಾಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‍ಖಾನ್ ಮಾತನಾಡಿ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ಸೂಚಿಸಿದ ಅನರ್ಹ ಶಾಸಕರಿಂದ ಅಲ್ಪಾಸಂಖ್ಯಾತರಿಗೆ ಹೆಚ್ಚು ಅನ್ಯಾಯವಾಗಿದೆ ಎಂದು ಟೀಕಿಸಿದರು. ಅಲ್ಪಸಂಖ್ಯಾತರ ಮತಗಳನ್ನು ಕೂಡ ಅನರ್ಹರು ಪಡೆದಿದ್ದಾರೆ ಎಂದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ ಮಾತನಾಡಿ, ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಸುಮಾರು 15 ಕೋಟಿ ರೂ. ಗಳನ್ನು ಜಿಲ್ಲಾಡಳಿತ ಖರ್ಚುಮಾಡದೆ ಉಳಿಸಿಕೊಂಡಿರುವದರಿಂದ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ ಹಾಗೂ ಸೋಮವಾರಪೇಟೆ ಅಧ್ಯಕ್ಷ ನಾಗರಾಜು ಉಪಸ್ಥಿತರಿದ್ದರು.