ಗೋಣಿಕೊಪ್ಪಲು, ಅ. 29: ಗೋಣಿಕೊಪ್ಪಲು ಪೆÇಲೀಸ್ ಉಪನಿರೀಕ್ಷಕರ ಕಚೇರಿಯಲ್ಲಿ ದಲಿತ ಮುಖಂಡರು ಹಾಗೂ ಪೆÇಲೀಸ್ ಅಧಿಕಾರಿಗಳ ನಡುವೆ ಸಂಪರ್ಕ ಸಭೆ ನಡೆಯಿತು. ಗೋಣಿಕೊಪ್ಪಲು ನೂತನ ಪೆÇಲೀಸ್ ವೃತ್ತ ನಿರೀಕ್ಷಕ ರಾಮಿರೆಡ್ಡಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳು, ಪರ್ಯಾಯ ಮಾರ್ಗೋಪಾಯ ಕುರಿತು ಪರಸ್ಪರ ಮಾತುಕತೆ ನಡೆಯಿತು.
ಮಾಯಮುಡಿಯ ಆದಿವಾಸಿ ಮಹಾಸಭಾದ ರಮೇಶ್ ಮಾತನಾಡಿ, ಋಣಮುಕ್ತ ಕಾಯ್ಧೆ ಅನ್ವಯ ಖಾಸಗಿ ಫೈನಾನ್ಸ್ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಿದರು. ಮಾಯಮುಡಿ ವ್ಯಾಪ್ತಿಯಲ್ಲಿ ಸಾಲವನ್ನು ನೀಡಿ, ನಂತರ ಮರುಪಾವತಿಗೆ ಪೀಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿನ ಶೋಷಿತರನ್ನು ಋಣ ಮುಕ್ತ ಮಾಡಲು ಕೇಳಿಕೊಂಡರು.
ಹುದಿಕೇರಿ ಸಮೀಪ ಹೈಸೊಡ್ಲೂರು ಗ್ರಾಮದಲ್ಲಿ ವೀರಾಜಪೇಟೆ ತಾ.ಪಂ. ಇಓ ಹೆಸರಿನಲ್ಲಿರುವ ಜಾಗದಲ್ಲಿ ಸುಮಾರು 74 ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬ ಶೆಡ್ ಇತ್ಯಾದಿ ಕಟ್ಟಿಕೊಂಡು ವಾಸವಿದ್ದು ಮೂಲ ಸೌಕರ್ಯ ಒದಗಿಸಿಲ್ಲ ಎಂದು ಐಟಿಡಿಪಿ ಇಲಾಖೆಯನ್ನು ದೂರಿದರು.
ಐಟಿಡಿಪಿ ಇಲಾಖೆಯ ಗಿರಿಜನ ವಿಸ್ತರಣಾಧಿಕಾರಿ ನವೀನ್ ಮಾತನಾಡಿ, ತಾ.ಪಂ. ಇಓ ಹೆಸರಿನಲ್ಲಿರುವ ಜಾಗಕ್ಕೆ ಮೊದಲು ಹಕ್ಕುಪತ್ರ ಮಾಡಿಸಿ, ಮಂಜೂರು ಮಾಡಿಕೊಂಡಲ್ಲಿ ಸೂಕ್ತ ಮೂಲಭೂತ ಸೌಕರ್ಯ ಒದಗಿಸಲಾಗುವದು ಎಂದು ಹೇಳಿದರು.
ಗಾಂಜಾ ಮಾರಾಟ
ಗೋಣಿಕೊಪ್ಪಲು ಮಾರುಕಟ್ಟೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ, ಕುಂದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡಲಾದ ಪೈಸಾರಿ ಜಾಗದಲ್ಲಿ ಕೆಲವರು ಅಕ್ರಮವಾಗಿ ಮನೆಯಲ್ಲಿ ಮದ್ಯಮಾರಾಟ ಮಾಡುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯ ಕೇಳಿ ಬಂತು. ಗೋಣಿಕೊಪ್ಪಲು ಪೆÇಲೀಸ್ ಉಪನಿರೀಕ್ಷಕ ಸುರೇಶ್ ಬೋಪಣ್ಣ ಅವರು ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಖಚಿತ ಮಾಹಿತಿ ನೀಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದು ಉತ್ತರಿಸಿದರು.
ಕುಂದ ಗ್ರಾಮದಲ್ಲಿ ಸುಮಾರು 116 ಬುಡಕಟ್ಟು ಕುಟುಂಬಕ್ಕೆ ನಿವೇಶನ ಗುರುತಿಸಲಾಗಿದೆ ಈ ಬಗ್ಗೆ ಮೂಲಭೂತ ಸೌಕರ್ಯ, ವಸತಿ ಒದಗಿಸುವಂತೆ ಬುಡಕಟ್ಟು ಕಾರ್ಮಿಕರ ಸಂಘದ ವೈ.ಬಿ.ಗಪ್ಪು ಅಧಿಕಾರಿಗಳ ಗಮನ ಸೆಳೆದರು.
ಕೆಲವು ಕಡೆ ಮನೆ ನಿರ್ಮಾಣಕ್ಕೆ ಗ್ರಾ.ಪಂ.ಅನುಮತಿ ನೀಡುತ್ತಿಲ್ಲ. ಹಕ್ಕುಪತ್ರಕ್ಕೆ ನಿರಾಕರಣೆ ಮಾಡುತ್ತಿರುವ ಹುದಿಕೇರಿ ಗ್ರಾ.ಪಂ. ಎದುರು ಸತ್ಯಾಗ್ರಹ ಮಾಡಲಾಗುವದು ಎಂದು ಜಿಲ್ಲಾ ಡಿಎಸ್‍ಎಸ್ ಸಂಚಾಲಕ ಪರಶುರಾಮ್ ನುಡಿದರು.
ಬೇಗೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ದಲಿತರು ಸಾವನ್ನಪ್ಪಿದ್ದಲ್ಲಿ ಹೂಳಲು ಜಾಗವಿಲ್ಲ. ಎಲ್ಲ ಪ್ರಭಾವಿಗಳಿಂದ ಅತಿಕ್ರಮಣಗೊಂಡಿದೆ. ಇತ್ತೀಚೆಗೆ ಬೇಗೂರುವಿನ ವ್ಯಕ್ತಿ ಶವವನ್ನು ಗೋಣಿಕೊಪ್ಪಲು ಗ್ರಾ.ಪಂ. ರುದ್ರಭೂಮಿಯಲ್ಲಿ ಹೂಳಲಾಯಿತು ಎಂದು ಅಲ್ಲಿನ ದಲಿತರು ತಮ್ಮ ಅಳಲು ತೋಡಿಕೊಂಡರು.
ಗೋಣಿಕೊಪ್ಪಲು ಮಸೀದಿ ರಸ್ತೆ ಮತ್ತು ಬೈಪಾಸ್ ರಸ್ತೆ, ಅರುವತ್ತೊಕ್ಕಲು ರಸ್ತೆ ಮಾರ್ಗ ಕುಡುಕರ ಉಪಟಳ ಅತಿಯಾಗಿದ್ದು ಮಹಿಳೆಯರ ಓಡಾಟ ಕಷ್ಟವಾಗಿದೆ ಎಂದು ತಾಲೂಕು ಸಂಚಾಲಕಿ ಲಕ್ಷ್ಮಿ ಅಭಿಪ್ರಾಯಪಟ್ಟರು.
ಮುಂದಿನ 45 ದಿನಕ್ಕೊಮ್ಮೆ ದಲಿತರಿಗೆ ಪೌಷ್ಟಿಕ ಆಹಾರ ನೀಡಲು ಟೆಂಡರ್ ಪ್ರಕ್ರಿಯೆ ಮುಗಿದಿದೆ,ಇನ್ನು ಮುಂದೆ ವಿತರಿಸಲಾಗುವದು ಎಂದು ಗಿರಿಜನ ವಿಸ್ತರಣಾಧಿಕಾರಿ ನವೀನ್ ಮಾಹಿತಿ ನೀಡಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಕುಮಾರ, ಯರವ ಒಕ್ಕೂಟ, ಬುಡಕಟ್ಟು ಕೃಷಿಕರ ಸಂಘ ಮುಂತಾದ ಸಂಘಟನೆಗಳ ಪ್ರಮುಖರು ಹಾಜರಿದ್ದರು.
-ಟಿ.ಎಲ್.ಎಸ್.