ಮಡಿಕೇರಿ, ಅ. 29: ಇತ್ತೀಚಿಗೆ ಬಿಡುಗಡೆಯಾದ ‘ಕೊಡಗ್‍ರ ಸಿಪಾಯಿ’ ಕೊಡವ ಚಲನಚಿತ್ರ ಕೊಲ್ಕತ್ತಾದಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

ಮೈಸೂರು ಕೊಡವ ಸಮಾಜದಲ್ಲಿ ‘ಕೊಡಗ್‍ರ ಸಿಪಾಯಿ’ ಚಲನಚಿತ್ರದ 51ನೇ ಪ್ರದರ್ಶನದ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವವು ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿರುವಾಗಲೇ ಕೊಡವ ಚಲನಚಿತ್ರವೊಂದು ಪ್ರದರ್ಶನಕ್ಕೆ ಅವಕಾಶ ಪಡೆದಿರುವದು ಹೆಮ್ಮೆಯ ವಿಚಾರವೆಂದರು.

ನ. 8 ರಿಂದ 15 ರವರೆಗೆ ಕೊಲ್ಕತ್ತಾದಲ್ಲಿ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ‘ಕೊಡಗ್‍ರ ಸಿಪಾಯಿ’ ಪ್ರದರ್ಶನ ಗೊಳ್ಳಲಿದೆ. ತಾವು ನಿರ್ಮಿಸಿದ ‘ಬಾಕೆಮನೆ’ ಕೊಡವ ಚಲನ ಚಿತ್ರ ಕೂಡ ಈ ಹಿಂದೆ ಅಂತರ್ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ಇದೀಗ ಅಪರೂಪದ ಉಪ ಭಾಷೆಗಳ ವಿಭಾಗದ ಚಲನಚಿತ್ರಗಳಲ್ಲಿ ‘ಕೊಡಗ್‍ರ ಸಿಪಾಯಿ’ ಅವಕಾಶ ಪಡೆದಿರುವದು ಅತ್ಯಂತ ಹರ್ಷದಾಯಕ ಎಂದು ಪ್ರಕಾಶ್ ಕಾರ್ಯಪ್ಪ ತಿಳಿಸಿದರು.

ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಸಂಪಾದಕರಾದ ಕಲ್ಯಾಟಂಡ ಬಿ. ಗಣಪತಿ ಮಾತನಾಡಿ, ಸಿನಿಮಾ ರಂಗದ ಮೂಲಕವು ಕೊಡವ ಭಾಷೆ, ಸಾಹಿತ್ಯ ಹಾಗೂ ಸಂಸ್ಕøತಿಯ ಬೆಳವಣಿಗೆಯಾಗುತ್ತಿರುವದು ಶ್ಲಾಘನೀಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಕೊಡವ ಸಮಾಜದ ಅಧ್ಯಕ್ಷ ಕೇಕಡ ಬೆಳ್ಯಪ್ಪ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪತ್ರಿಕಾ ರಂಗದ ಸೇವೆಗಾಗಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಿನಿಮಾ ಕ್ಷೇತ್ರಕ್ಕೆ ತೇಲಪಂಡ ಪವನ್ ತಮ್ಮಯ್ಯ, ಸಾಹಿತ್ಯ ಕ್ಷೇತ್ರದ ಪ್ರೋತ್ಸಾಹಕ್ಕಾಗಿ ಬೊಳ್ಳಜಿರ ಬಿ. ಅಯ್ಯಪ್ಪ, ಕೊಡಗ್‍ರ ಸಿಪಾಯಿ ಸಿನಿಮಾಕ್ಕೆ ಕಥೆ ಒದಗಿಸಿದ ಉಳುವಂಗಡ ಕಾವೇರಿ ಉದಯ, ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ನಟರುಗಳಾದ ಅರ್ಜುನ್ ದೇವಯ್ಯ, ತೇಜಸ್ವಿನಿ ಶರ್ಮ ಹಾಗೂ ವಾಂಚಿರ ವಿಠಲ್ ನಾಣಯ್ಯ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ನಿರ್ಮಾಪಕ ಹಾಗೂ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಅರ್ಜುನ್ ದೇವಯ್ಯ ಅವರಿಗೆ ಪೀಚೆಕತ್ತಿ ನೀಡಿ ಸನ್ಮಾನಿಸಿದರು.

ಮೈಸೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಡಾ.ಆದೆಂಗಡ ಕುಟ್ಟಪ್ಪ ಉಪಸ್ಥಿತರಿದ್ದರು. ಲೌಲಿ ಪ್ರಾರ್ಥಿಸಿ, ರವಿ ಬೆಳ್ಯಪ್ಪ ಸ್ವಾಗತಿಸಿದರು.