ಕುಶಾಲನಗರ, ಅ. 29: ಕುಶಾಲನಗರ ಖಾಸಗಿ ಬಸ್ ನಿಲ್ದಾಣ ಸ್ಪೋಟಕ ಸಾಮಗ್ರಿಗಳ ಮಾರಾಟ ಕೇಂದ್ರವಾಗಿ ಪರಿವರ್ತನೆಯಾಗುವ ದರೊಂದಿಗೆ ಅಪಾಯಕಾರಿ ಬೆಳವಣಿಗೆ ಕಂಡುಬಂದಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ 5 ಪಟಾಕಿ ಮಳಿಗೆಗಳು ಕಳೆದ ಎರಡು ದಿನಗಳಿಂದ ವ್ಯಾಪಾರ ವಹಿವಾಟು ನಡೆಸುತ್ತಿದ್ದು ಸ್ಪೋಟಕ ವಸ್ತುಗಳ ಮಾರಾಟಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ನೀಡಿದ ಪಟ್ಟಣ ಪಂಚಾಯ್ತಿ ಕ್ರಮವನ್ನು ನಾಗರಿಕರು ಆಕ್ಷೇಪಿಸಿದ್ದಾರೆ.
ಅಪಾಯಕಾರಿ ಪಟಾಕಿಗಳನ್ನು ದಾಸ್ತಾನು ಮಾಡುವದರೊಂದಿಗೆ ಮಾರಾಟಕ್ಕೆ ಇಡುವ ನಿಯಮಾವಳಿಗಳನ್ನು ಅನುಸರಿಸದೆ ವಿವಿಧ ಇಲಾಖೆಗಳು ಪಟಾಕಿ ಮಾರಾಟ ಮಳಿಗೆಗಳಿಗೆ ಅನುಮತಿ ನೀಡಿರುವದು ಸಂಶಯಕ್ಕೆ ಎಡೆಮಾಡಿದೆ. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿ ಬಡಾವಣೆಗಳ ನಡುವೆ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ದಿನನಿತ್ಯ 50 ಕ್ಕೂ ಅಧಿಕ ಬಸ್‍ಗಳು ಓಡಾಡುತ್ತಿದ್ದು, ಜನನಿಬಿಡ ಸ್ಥಳದಲ್ಲಿ ಸ್ಪೋಟಕ ವಸ್ತುಗಳ ಮಾರಾಟಕ್ಕೆ ನಿರ್ಬಂಧ ಇದ್ದರೂ ಅಧಿಕಾರಿಗಳು ಕಣ್ಮುಚ್ಚಿ ಅನುಮತಿ ನೀಡಿರುವದು ಅಪಾಯಕ್ಕೆ ಎಡೆಮಾಡಿದಂತಾಗುತ್ತದೆ ಎಂದು ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು ಆರೋಪಿಸಿದ್ದಾರೆ. ಬಸ್‍ಗಳು ಸಂಚರಿಸುವ ಸಂದರ್ಭ ಯಂತ್ರಗಳಿಂದ ಹೊರ ಸೂಸುವ ಕಿಡಿಗಳು ಅಥವಾ ಯಾವದೇ ಅನಾಹುತ ಸಂಭವಿಸುವ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದ್ದಾರೆ.
ಪ.ಪಂ. ಅಧಿಕಾರಿಗಳು ಸ್ಥಳ ಗುರುತಿಸಿದ್ದು ಪೊಲೀಸ್, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ನಿರಾಕ್ಷೇಪಣ ಪತ್ರ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು ಈ ಬಗ್ಗೆ ಸಂಬಂಧಿಸಿದ ಪಂಚಾಯ್ತಿ ಮುಖ್ಯಾಧಿಕಾರಿಯೊಂದಿಗೆ ಮಾಹಿತಿ ತರಿಸಲಾಗುವದು ಎಂದು ಶಕ್ತಿಗೆ ಪ್ರತಿಕ್ರಿಯಿಸಿದ್ದಾರೆ. ವರ್ಷಂಪ್ರತಿ ಮಳಿಗೆಗಳನ್ನು ನಡೆಸುತ್ತಿದ್ದ ಪಂಚಾಯ್ತಿಯ ಹಳೆಯ ಕಟ್ಟಡದ ಆವರಣದಲ್ಲಿ ವಾಣಿಜ್ಯ ಸಮುಚ್ಚಯ ನಿರ್ಮಾಣವಾಗುತ್ತಿದ್ದು ಈ ಹಿನ್ನಲೆಯಲ್ಲಿ ಸ್ಥಳದ ಅಭಾವದ ಕಾರಣ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪ.ಪಂ. ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇತ್ತ ಸಮೀಪದ ಕೊಪ್ಪ ಗ್ರಾಮದಲ್ಲಿ ಕೂಡ ಹೆದ್ದಾರಿ ರಸ್ತೆ ಬದಿಯಲ್ಲಿ ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಳಿಗೆಗಳಿಗೆ ನಿಯಮಬಾಹಿರ ವಾಗಿ ಅನುಮತಿ ನೀಡಿರುವದು ಕಂಡುಬಂದಿದೆ. ಅಪಾಯಕ್ಕೆ ಆಹ್ವಾನ ನೀಡುವಂತಹ ವ್ಯವಸ್ಥೆಗಳಿಗೆ ಅನುಮತಿ ನೀಡುವ ಸಂದರ್ಭ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕಿದೆ ಎಂಬದು ನಾಗರಿಕರ ಆಗ್ರಹವಾಗಿದೆ.
-ಚಂದ್ರಮೋಹನ್