ಸೋಮವಾರಪೇಟೆ, ಅ. 28: ತಾಲೂಕಿನ ವಿವಿಧ ಗ್ರಾಮಗಳ 50 ಮಂದಿ ಫಲಾನುಭವಿಗಳಿಗೆ, ಕಂದಾಯ ಇಲಾಖೆಯಿಂದ ನೀಡುವ ಹಕ್ಕುಪತ್ರಗಳನ್ನು ಶಾಸಕ ಅಪ್ಪಚ್ಚು ರಂಜನ್ ತಮ್ಮ ಕಚೇರಿ ಆವರಣದಲ್ಲಿ ವಿತರಿಸಿದರು.
ನಂತರ ಮಾತನಾಡಿದ ಅವರು, ಯಾವದೇ ಕಾರಣಕ್ಕೂ ಮಂಜೂರಾದ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡುವದಾಗಲಿ, ಹಕ್ಕುಪತ್ರವನ್ನು ಪರಭಾರೆ, ಅಡಮಾನ ಮಾಡುವದು ಕಾನೂನಿನನ್ವಯ ಅಪರಾಧ ವಾಗಿರುತ್ತದೆ.
ಅಂತಹ ಪ್ರಕರಣಗಳು ಕಂಡುಬಂದಲ್ಲಿ ಮಂಜೂರಾದ ಭೂಮಿಯನ್ನು ಸರಕಾರವೇ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಹಶೀಲ್ದಾರ್ ಗೋವಿಂದರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.