ಸಿದ್ದಾಪುರ, ಅ. 28: ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರನ್ನು ಆಗಿಂದಾಗ್ಗೆ ಕೆಲಸದಿಂದ ಬದಲಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಪೌರ ಕಾರ್ಮಿಕರು ಕಸಗಳನ್ನು ಗುಡಿಸದೇ ವಿಲೇವಾರಿ ಮಾಡದೇ ಪ್ರತಿಭಟಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರದ ಗ್ರಾಮ ಪಂಚಾಯಿತಿಯ ಪಿಡಿಓ ಅವರು ಆಗಿಂದಾಗ್ಗೆ ಕಾರ್ಮಿಕರನ್ನು ಬದಲಾಯಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿ.ಡಿ.ಓ ವಿಶ್ವನಾಥ್ ಪೌರ ಕಾರ್ಮಿಕರಲ್ಲಿ ಕೆಲವು ಕಾರ್ಮಿಕರು ಸಮಯಕ್ಕೆ ಸರಿಯಾಗಿ ಕಸ ವಿಲೇವಾರಿ ಕೆಲಸಕ್ಕೆ ಹಾಜರಾಗುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಕಾರ್ಮಿಕರಿಗೆ ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಮಯ ಪಾಲಿಸುವಂತೆ ತಿಳಿಸಿದ್ದನ್ನು ಪಾಲಿಸದೇ ಪೌರ ಕಾರ್ಮಿಕರು ಕಳೆದ ಎರಡು ದಿನದಿಂದ ಕಸ ವಿಲೇವಾರಿ ಮಾಡದೇ ಇರುವ ಬಗ್ಗೆ ಅವರಿಗೆ ಸೂಕ್ತ ರೀತಿಯ ಎಚ್ಚರಿಕೆ ನೀಡಲಾಗಿದೆ ಎಂದರು.