ಶನಿವಾರಸಂತೆ, ಅ. 28: ಕೊಡ್ಲಿಪೇಟೆಯ ಬಸ್ ನಿಲ್ದಾಣ ಬಳಿ ನಿನ್ನೆ ರಾತ್ರಿ ಪಟಾಕಿ ಸಿಡಿಸಿದ್ದಲ್ಲದೆ; ಪರಸ್ಪರ ಗಲಾಟೆ ಮಾಡುತ್ತಿದ್ದ ವೇಳೆ ಸಮಾಧಾನಗೊಳಿಸಲು ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪ ಮೇರೆಗೆ ನಾಲ್ವರನ್ನು ಬಂಧಿಸಲಾಗಿದೆ.

ಕೊಡ್ಲಿಪೇಟೆ ಬಸ್ ನಿಲ್ದಾಣದ ಅಂಗಡಿಯೊಂದರ ಮುಂದೆ ಪಟಾಕಿ ಸಿಡಿಸುತ್ತಾ ಗಲಾಟೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಅಲ್ಲಿನ ನಿವಾಸಿಗಳಾದ ಆದಿತ್ಯ, ಮಂಜು, ಅಶ್ವಥ್ ಹಾಗೂ ದುಶ್ಯಂತ್ ಆರೋಪಿಗಳಾಗಿದ್ದು, ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ಪೊಲೀಸ್ ಕಾನ್‍ಸ್ಟೇಬಲ್ ವಿನಯ್‍ಕುಮಾರ್ ಹಾಗೂ ಹೋಂ ಗಾರ್ಡ್ ರಘುಕುಮಾರ್ ಧಾವಿಸಿದ್ದರು. ಈ ವೇಳೆ ಗಲಾಟೆ ಮಾಡುತ್ತಿದ್ದವರನ್ನು ಸಮಾಧಾನಪಡಿಸಲು ಯತ್ನಿಸಿದಾಗ; ಆರೋಪಿಗಳು ಇಬ್ಬರ ಸಮವಸ್ತ್ರವನ್ನು ಹರಿದು ಹಾಕಿ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ನಿಖಿಲ್ ಮತ್ತು ಧನುಷ್ ಎಂಬ ಯುವಕರು ಜಗಳ ಬಿಡಿಸಲು ಬಂದಾಗ ನಾಲ್ವರು ಆರೋಪಿಗಳು ಕತ್ತಲೆ ನಡುವೆ ಪರಾರಿಯಾಗಿದ್ದಾರೆ.

ಹಲ್ಲೆ ಸಂದರ್ಭ ಗಾಯ ಗೊಂಡಿರುವ ವಿನಯ್‍ಕುಮಾರ್ ನೀಡಿರುವ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಬಗ್ಗೆ ಡಿವೈಎಸ್‍ಪಿ ಮುರುಳಿಧರ್, ವೃತ್ತ ನಿರೀಕ್ಷಕ ನಂಜುಂಡೇಗೌಡ ನಿರ್ದೇಶನ ದಲ್ಲಿ, ಠಾಣಾಧಿಕಾರಿ ಕೃಷ್ಣನಾಯಕ್, ಪ್ರೊಬೆಷನರಿ ಸಬ್‍ಇನ್ಸ್‍ಪೆಕ್ಟರ್ ಕರಿಬಸಪ್ಪ, ಸಿಬ್ಬಂದಿಗಳಾದ ಬೋಪಣ್ಣ, ಮರುಳಿಧರ್, ಡಿಂಪಲ್ ಅವರುಗಳು ಇಂದು ಬೆಳಿಗ್ಗೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಮಲ್ಲಿ ಪಟ್ಟಣದಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.