ಮಡಿಕೇರಿ, ಅ. 28 : ಆಯುರ್ವೇದ 4 ಸಾವಿರ ವರ್ಷಗಳಿಗೂ ಹೆಚ್ಚು ಹಳೆಯದಾದ ಔಷಧ ಪದ್ಧತಿಯಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ರಾಮಚಂದ್ರ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಯುಷ್ ಇಲಾಖೆ ವತಿಯಿಂದ ಧನ್ವಂತರಿ ಜಯಂತಿ ದೀರ್ಘಾಯುಷ್ಯಕ್ಕಾಗಿ ಆಯುರ್ವೇದ ಎಂಬ ಘೋಷ ವಾಕ್ಯದೊಂದಿಗೆ ನಗರದ ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ 4ನೇ ರಾಷ್ಟ್ರೀಯ ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಷ್ಟಾಂಗ ಆಯುರ್ವೇದದ ಅಧಿದೇವತೆಯಾದ ಧನ್ವಂತರಿ ಜಯಂತಿ ಯನ್ನು ಭಾರತ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿ ಹಮ್ಮಿಕೊಂಡಿರುವದಾಗಿ ಹಾಗೂ ಆಯುರ್ವೇದ ಸಕಲ ಆರೋಗ್ಯ ಹಾಗೂ ರೋಗ ಬಾರದಂತೆ ತಡೆಯಲು ಅನುಕೂಲಕರ ಚಿಕಿತ್ಸೆಯಾಗಿದ್ದು, ಶಿಬಿರಾರ್ಥಿಗಳು ಅತ್ಯುತ್ತಮ ನಿಸರ್ಗಕ್ಕೆ ಅನುಕೂಲಕರವಾಗಿ ರುವ ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಳ್ಳಲು ಕೋರಿದರು.
ಆಯುರ್ವೇದ ಔಷಧಿ ಪದ್ಧತಿಯು ಪೂರ್ವಜರಿಂದ ಬಂದಿದ್ದು, ಸರ್ವ ರೋಗಗಳಿಗೆ ಆಯುರ್ವೇದದಲ್ಲಿ ಔಷಧಿಗಳಿವೆ. ಪೂರ್ವಜರ ಔಷಧಿ, ಆಹಾರ ಪದ್ಧತಿ, ದಿನನಿತ್ಯದ ಪಂಚ ಕರ್ಮಗಳನ್ನು ಹಾಗೂ ಪ್ರಕೃತಿಯಲ್ಲಿ ಕೂಡ ಒಂದು ಸಮತೋಲನವನ್ನು ಉಂಟು ಮಾಡುತ್ತದೆ ಎಂದು ಡಾ. ರಾಮಚಂದ್ರ ತಿಳಿಸಿದರು.
ಡಾ. ಪಿ.ಎಸ್. ಶ್ಯಾಮ್ ಪ್ರಸಾದ್ ದೀರ್ಘಾಯುಷ್ಯಕ್ಕಾಗಿ ಆಯುರ್ವೇದ ಎಂಬ ಘೋಷ ವಾಕ್ಯದೊಂದಿಗೆ, ವೇದ ಎಂಬದು ಜ್ಞಾನ, ಆಯಷ್ ಎಂದರೆ ವಯಸ್ಸು ಎಂಬಂತೆ ಇಂದು ಜೀವನವನ್ನು ಹೇಗೆ ನಡೆಸಬೇಕು. ದಿನನಿತ್ಯ ಜೀವನದಲ್ಲಿ ನಾವು ಹೇಗೆ ಆರೋಗ್ಯವಾಗಿರಬೇಕು ಎಂಬದರ ಕುರಿತು ಮಾಹಿತಿ ನೀಡಿದರು. ದಿನನಿತ್ಯದ ಚಟುವಟಿಕೆ, ಆಹಾರ ಪದ್ಧತಿಯು ಉತ್ತಮವಾಗಿದ್ದರೆ ಯಾವದೇ ರೀತಿಯ ಒತ್ತಡ, ಆರೋಗ್ಯ ಸಮಸ್ಯೆ ಇರುವದಿಲ್ಲ. ವಿಜ್ಞಾನ ತುಂಬಾ ಆಳವಾಗಿದೆ. ದೀರ್ಘ ಆಯಸ್ಸಿಗಾಗಿ ಸಣ್ಣ ಸಣ್ಣ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರಾಧಾ, ಅಶ್ವಿನಿ ಆಸ್ಪತ್ರೆಯ ಡಾ. ಕುಲಕರ್ಣಿ, ಲೀನಾ ಲೋಬೋ, ಆಯುಷ್ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಡಾ. ಶುಭ ಪ್ರಾರ್ಥಿಸಿ, ಶ್ರೀನಿವಾಸ್ ಸ್ವಾಗತಿಸಿ, ಈಶ್ವರಿ ವಂದಿಸಿದರು.