ಸಿದ್ದಾಪುರ, ಅ. 28: ಗುಹ್ಯ ಗ್ರಾಮದ ನೆರೆ ಸಂತ್ರಸ್ತರಿಗೆ ಆಧಾರ್ ಸೇವೆಯನ್ನು ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಇತ್ತೀಚೆಗೆ ಸಂತ್ರಸ್ತರ ನಿವೇಶನ ಹೋರಾಟ ಸಮಿತಿ ಪ್ರತಿಭಟನೆ ನಡೆಸಿದ ಸಂದರ್ಭ ಸಂತ್ರಸ್ತರು ದಾಖಲೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮೊಬೈಲ್ ಆಧಾರ್ ಕಿಟ್ ಮೂಲಕ ಸಂತ್ರಸ್ತರಿಗೆ ಆಧಾರ್ ಸೇವೆಯನ್ನು ಒದಗಿಸಲಾಗುತ್ತಿದ್ದು, ಗುಹ್ಯ ಗ್ರಾಮದ ಸಂತ್ರಸ್ತರಿಗೆ ಗುಹ್ಯ ಅಂಗನವಾಡಿಯಲ್ಲಿ ಆಧಾರ್ ಸೇವೆಯನ್ನು ನೀಡಲಾಗುತ್ತಿದೆ. ಗುಹ್ಯ, ಕೂಡುಗದ್ದೆ, ಕಕ್ಕಟ್ಟುಕಾಡು ಭಾಗದ ಸಂತ್ರಸ್ತರು ಆಧಾರ್ ತಿದ್ದುಪಡಿ, ನೂತನ ಆಧಾರ್, ವಿಳಾಸದ ಬದಲಾವಣೆ ಮುಂತಾದ ಸೇವೆಯನ್ನು ಪಡೆದರು.
ಈ ಸಂದರ್ಭ ಗ್ರಾಮ ಲೆಕ್ಕಿಗ ಓಮಪ್ಪ ಬಣಾಕಾರ್, ಸಹಾಯಕ ಕೃಷ್ಣ, ಗ್ರಾ.ಪಂ. ಸದಸ್ಯರಾದ ರೆಜಿತ್ ಕುಮಾರ್ ಗುಹ್ಯ, ಪ್ರತಿಮಾ ಚಂದ್ರಶೇಖರ್, ಆಧಾರ್ ವಿಭಾಗದ ರಶ್ಮಿ ಸೇರಿದಂತೆ ಇನ್ನಿತರರು ಇದ್ದರು.