ಸೋಮವಾರಪೇಟೆ, ಅ. 28: ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಂದ ರೈತರು, ಭೂಮಾಲೀಕರು ಹಾಗೂ ಮರ ವ್ಯಾಪಾರಿಗಳಿಗೆ ಕಿರುಕುಳವಾಗುತ್ತಿದ್ದು, ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕೆಂದು ಜಿಲ್ಲಾ ಭೂಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಕೆ.ಎ. ಆದಂ, ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನರು ಸಂಕಷ್ಟದಲ್ಲಿದ್ದಾರೆ. ಆದರೆ ಈಚೆಗೆ ಬಂದಿರುವ ಡಿ.ಸಿ.ಎಫ್. ಅವರು, ರೈತರು ಸ್ವಂತ ಉಪಯೋಗಕ್ಕೆ ಮರ ಕಡಿಯಲು ಕಚೇರಿಗೆ ತೆರಳಿದರೆ, ಒದಗಿಸಲು ಸಾಧ್ಯವಾಗದ ದಾಖಲಾತಿಗಳನ್ನು ಕೇಳಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು. ಡಿ.ಸಿ.ಎಫ್. ಅವರನ್ನು ವರ್ಗಾವಣೆಗೊಳಿಸಬೇಕು. ಜಿಲ್ಲೆಯನ್ನು ಪ್ರೀತಿಸುವ ದಕ್ಷ ಅಧಿಕಾರಿಯನ್ನು ಕೊಡಗಿಗೆ ನಿಯೋಜಿಸಬೇಕು. ತಪ್ಪಿದಲ್ಲಿ ಸಂಘದ ವತಿಯಿಂದ ರೈತರ ಸಹಕಾರದೊಂದಿಗೆ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲಾಗುವದು ಎಂದು ಸಂಘದ ಅಧ್ಯಕ್ಷ ರವಿ ಉತ್ತಪ್ಪ ಹೇಳಿದರು.

ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮನೋರಂಜನ್, ನಿರ್ದೇಶಕರುಗಳಾದ ಸುಂದರ್, ಸುರೇಶ್, ಪುಟ್ಟಪ್ಪ ಇದ್ದರು.