ಪೆರಾಜೆ, ಅ. 26: ಇದೇ ಮೊದಲ ಬಾರಿಗೆ ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆ ಪೆರಾಜೆ ಗ್ರಾಮ ಪಂಚಾಯತ್ನಲ್ಲಿ ಪಂಚಾಯತ್ ಅಧ್ಯಕೆÀ್ಷ ಜಯಲಕ್ಷ್ಮಿ ಧರಣೀಧರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಶೇಖರ್ ಉಪಸ್ಥಿತರಿದ್ದರು.
ಸೌಭಾಗ್ಯ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬವನ್ನು ಸಭೆಯಲ್ಲಿ ಚರ್ಚಿಸಿ, ಆದಷ್ಟು ಬೇಗ ಕಾಮಗಾರಿ ಆರಂಭ ಮಾಡಲು ಕ್ರಮ ಕೈಗೊಳ್ಳುವಂತೆ ಚೆಸ್ಕಾಂ ಅಧಿಕಾರಿಗಳಿಗೆ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಸೂಚನೆ ನೀಡಿದರು,
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ, ಫಲಾನುಭವಿಗಳ ಬಗ್ಗೆ ಮಾಹಿತಿ ನೀಡಿದರು.
ಕಂದಾಯ ಇಲಾಖೆಯ ಅಧಿಕಾರಿ ಗ್ರಾಮದಲ್ಲಿ ಇರುವ ಫಲಾನುಭವಿಗಳ ಮಾಹಿತಿ ನೀಡಿದರು, ಈ ವೇಳೆ ಅನೇಕ ಫಲಾನುಭವಿಗಳಿಗೆ ವೇತನ ನಿಂತುಹೋಗಿರುವ ಬಗ್ಗೆ ಸದಸ್ಯರು ಪ್ರಶ್ನೆ ಮಾಡಿದಾಗ ಸರಕಾರದ ಆದೇಶದ ಪ್ರಕಾರ ದುಡಿಯುವ 18 ವರ್ಷದ ಗಂಡುಮಕ್ಕಳು ಇರುವ ಫಲಾನುಭವಿಗಳ ವೇತನ ಕಡಿತ ಮಾಡಲಾಗಿದೆ ಎಂದು ಉತ್ತರಿಸಿದರು. ಈ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಿ, ಪುನರ್ ಪರಿಶೀಲನೆ ಮಾಡಲು ನಾಗೇಶ್ ಕುಂದಲ್ಪಾಡಿ ಸೂಚನೆ ನೀಡಿದರು.
ಕಳೆದ ಗ್ರಾಮಸಭೆಯಲ್ಲಿ ತುಂಬಾ ಚರ್ಚೆ ನಡೆದ ಪಾಳ್ಯ ಅಂಗನವಾಡಿ ಪಕ್ಕ ಇರುವ ಅಪಾಯಕಾರಿ ಬೀಟಿ ಮರ ತೆರವುಗೊಳಿಸಲು ಇಲಾಖೆಯಿಂದ ಮರ ಕತ್ತರಿಸಲು ಅನುಮತಿ ದೊರೆತಿದ್ದು, ಆದರೆ ಜಾಗದ ಮಾಲೀಕರು ತಡೆಯೊಡ್ಡಿರುವ ಕಾರಣ ಕೆಲಸ ಬಾಕಿ ಉಳಿದಿರುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು,
ಉಳಿದಂತೆ ಗ್ರಾಮ ವ್ಯಾಪ್ತಿಯ ಎಲ್ಲಾ ಶಾಲೆ, ಅಂಗನವಾಡಿ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಳ್ಳಲಾಯಿತು.
ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಪಂಚಾಯತ್ ಸದಸ್ಯರುಗಳು, ಪಿಡಿಒ ಮಹಾದೇವ ಪ್ರಭು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.