ಗೋಣಿಕೊಪ್ಪಲು ವರದಿ, ಅ. 26: ರಾಸಾಯನಿಕ ಗೊಬ್ಬರ ನೀರಿನಲ್ಲಿ ಕೊಚ್ಚಿ ಹೋಗದಂತೆ ತಡೆಯಲು ಮಿತವಾಗಿ ಗೊಬ್ಬರ ಬಳಕೆಗೆ ಕೃಷಿಕರು ಮುಂದಾಗಬೇಕು ಎಂದು ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಶಿವಪ್ರಸಾದ್ ಸಲಹೆ ನೀಡಿದರು.
ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ, ಭಾರತೀಯ ಅನುಸಂಧಾನ ಪರಿಷತ್, ಕೃಷಿ ಇಲಾಖೆ ಮತ್ತು ಮಂಗಳೂರು ಫರ್ಟಿಲೈಸರ್ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ರಾಸಾಯನಿಕ ಗೊಬ್ಬರ ಬಳಕೆ ಅರಿವು ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಫಸಲು ಹೆಚ್ಚಾಗುತ್ತಿದೆ ಎಂದು ಹೆಚ್ಚಾಗಿ ಗೊಬ್ಬರ ಹಾಕುವದರಿಂದ ಗಿಡ ಗೊಬ್ಬರ ಹೀರುತ್ತದೆ ಎಂಬ ನಂಬಿಕೆ ಬೇಡ. ರಸಸಾರ ಪರೀಕ್ಷೆ ನಡೆಸಿ ಮಣ್ಣಿಗೆ ಬೇಕಾದ ಪೋಶಕಾಂಶಗಳನ್ನು ಮಾತ್ರ ನೀಡುವದು ಒಳ್ಳೆಯದು ಎಂದರು. ಪ್ರಧಾನ ವಿಜ್ಞಾನಿ ಡಾ. ಅಂಕೇಗೌಡ ಮಾತನಾಡಿ, ಮಣ್ಣಿನ ಗುಣ ಆಧರಿಸಿ ಕೃಷಿಗೆ ಮುಂದಾಗಬೇಕಿದೆ. ಕೃಷಿ ತಂತ್ರಜ್ಞಾನವು ಬೇಗ ಸಿಗುತ್ತಿದ್ದರೂ ಕೂಡ ಮಣ್ಣಿನ ಫಲವತ್ತತೆಯತ್ತ ಕೃಷಿಕರು ನಿಗಾವಹಿಸಬೇಕು ಎಂದರು. ಗೊಬ್ಬರ ಬಳಕೆ ಬಗ್ಗೆ ಡಾ. ಆದರ್ಶ್ ಮಾಹಿತಿ ನೀಡಿದರು. ಈ ಸಂದರ್ಭ ಕಾಳು ಮೆಣಸು, ಏಲಕ್ಕಿ, ಕಾಫಿ, ಶುಂಠಿ ಬೆಳೆಯಲ್ಲಿನ ಅಧಿಕ ಮತ್ತು ಗುಣಮಟ್ಟದ ಫಸಲು ತೆಗೆಯುವ ವಿಧಾನದ ಬಗ್ಗೆ, ವಿಜ್ಞಾನಿಗಳೊಂದಿಗೆ ಕೃಷಿಕರು ಸಂವಾದ ನಡೆಸಿದರು. ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್, ವಿಜ್ಞಾನಿಗಳಾದ ಡಾ. ಪ್ರಭಾಕರ್, ಡಾ. ವೀರೇಂದ್ರ ಕುಮಾರ್ ಇದ್ದರು.