ಮಡಿಕೇರಿ, ಅ. 26: ದೇಶದ ಕ್ರೀಡಾ ರಂಗದಲ್ಲಿ ಕೊಡಗಿನ ಕ್ರೀಡಾಪಟುಗಳು ಬಹುತೇಕ ಕ್ರೀಡೆಯ ಎಲ್ಲಾ ವಿಭಾಗಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಭಾರತ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಲಂಪಿಕ್ಸ್ ಸೇರಿದಂತೆ ಇನ್ನಿತರ ಪ್ರತಿಷ್ಠಿತ ಕ್ರೀಡೆಗಳಲ್ಲಿ ಪ್ರತಿನಿಧಿಸಿ ದೇಶಕ್ಕೆ ಪದಕದೊಂದಿಗೆ ಕೊಡಗಿನ ಪಟುಗಳು ಹೆಸರು ತಂದಿದ್ದಾರೆ.
ಇದೀಗ ಜಿಲ್ಲೆಯ ಮತ್ತೋರ್ವ ಯುವಕ ಹೊಸದೊಂದು ಆವಿಷ್ಕಾರದ ಮೂಲಕ ಹೆಸರು ಮಾಡುತ್ತಿದ್ದಾರೆ. ಇಂದೊಂದು ಸಮರ ಕಲೆಯ ಮಾದರಿಯ ಕ್ರೀಡೆ.
ಮುಆಯ್‍ಥಾಯ್, ಜಿಯು ಟಿಟ್ಸ್ - ಕಿಕ್ ಬಾಕ್ಸಿಂಗ್ ಎಂಬದು ಈ ಕ್ರೀಡೆಯ ಹೆಸರು. ಇದು ಭಾರತದಲ್ಲಿ ಅಷ್ಟು ಜನಪ್ರಿಯತೆಯನ್ನು ಪ್ರಸ್ತುತ ಹೊಂದಿಲ್ಲವಾದರೂ, ಇದೀಗ ಮೆಲ್ಲಮೆಲ್ಲನೆ ಜನಪ್ರಿಯವಾಗುತ್ತಿದೆ. ವಿದೇಶಗಳಲ್ಲಿ ಈ ರೋಮಾಂಚನಕಾರಿಯಾದ ಕ್ರೀಡೆಗೆ ಹೆಚ್ಚು ಒಲವು ಇದೆ. ಈ ಕಿಕ್ ಬಾಕ್ಸಿಂಗ್‍ನಲ್ಲಿ ಇದೀಗ ಕೊಡಗಿನ ಯುವಕನೋರ್ವ ಗಮನಾರ್ಹ ಸಾಧನೆ ಮಾಡುತ್ತಿದ್ದಾನೆ. ರಾಷ್ಟ್ರಮಟ್ಟ ದಲ್ಲಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ಸಾಧನೆಯ ಮಿಂಚು ಹರಿಸಿರುವ ಜಿಲ್ಲೆಯ ಅಯ್ಯಂಡ ಅರ್ಜುನ್ ಕಾವೇರಪ್ಪ ಪ್ರಸ್ತುತ ಥಾಯ್ಲೆಂಡ್‍ನಲ್ಲಿ ಜರುಗಿದ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಜಯಭೇರಿ ಕಂಡಿದ್ದಾರೆ. ತಾ. 22ರಂದು ಥಾಯ್ಲೆಂಡ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಈತ ಎದುರಾಳಿ ವಿರುದ್ಧ ಜಯಗಳಿಸಿದ್ದಾನೆ. ಈ ಮೂಲಕ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಲಿರುವ ಆಸ್ಟ್ರೇಲಿಯನ್ ಚಾಂಪಿಯನ್‍ಶಿಪ್‍ಗೆ ಅಗತ್ಯ ತಯಾರಿ ನಡೆಸುತ್ತಿದ್ದಾರೆ. ಈ ಪ್ರತಿಷ್ಠಿತ ಕಿಕ್ ಬಾಕ್ಸಿಂಗ್ ಕ್ರೀಡೆ ಜನವರಿ 24ರಿಂದ ಆರಂಭಗೊಳ್ಳಲಿದೆ.
ಅರ್ಜುನ್ ಕಾವೇರಪ್ಪ ಕುರಿತು : ಮಡಿಕೇರಿಯ ನಿವಾಸಿಗಳಾದ ಅಯ್ಯಂಡ ಮಂಜು ಮತ್ತು ಶಮ್ಮಿ ದಂಪತಿಯ ಪುತ್ರ ಅರ್ಜುನ್ ಕಾವೇರಪ್ಪ ಮೈಸೂರಿನ ವಿಪ್ರೋ ಟೆಕ್ನಾಲಜೀಸ್‍ನಲ್ಲಿ ಉದ್ಯೋಗ ದಲ್ಲಿದ್ದರೂ, ಕಿಕ್ ಬಾಕ್ಸಿಂಗ್‍ನ ಗೀಳಿನಿಂದಾಗಿ ಉದ್ಯೋಗ ತ್ಯಜಿಸಿ ಈ ಕ್ರೀಡೆಯ ಹಿಂದೆ ಬಿದ್ದಿದ್ದಾನೆ. ಸ್ವಯಂಪ್ರೇರಣೆಯ ಆಸಕ್ತಿಯಿಂದ ಇದರಲ್ಲಿ ತೊಡಗಿಸಿಕೊಂಡ ಅರ್ಜುನ್ 2016ರ ನವೆಂಬರ್‍ನಲ್ಲಿ ಕೇರಳ ಹಾಗೂ ಬಳಿಕ ಗುಜರಾತ್‍ನ ಸೂರತ್‍ನಲ್ಲಿ ನಡೆದ ಚಾಂಪಿಯನ್ ಶಿಫ್‍ನಲ್ಲಿ ಬೆಳ್ಳಿ ಪದಕ, 2017ರ ಆಗಸ್ಟ್ ಹಾಗೂ 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮು ಆಯ್ ಥಾಯ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕಗಳಿಸಿದ್ದಾನೆ.
2018ರಲ್ಲಿ ಬೆಂಗಳೂರಿನಲ್ಲಿ ನಡೆದ ಏಷ್ಯನ್ ಜಿಯು-ಜಿಟ್ಸ್ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕದ ಸಾಧನೆ ಈತನದ್ದಾಗಿದೆ.
ಪ್ರಸ್ತುತ ಥಾಯ್ಲೆಂಡ್‍ನಲ್ಲಿ ಜರುಗಿದ ಈ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಹಣದ ಅಗತ್ಯವಿದ್ದರಿಂದ ಅಲ್ಲಿಗೆ ತೆರಳಲು ಅರ್ಜುನ್ ಸಾಕಷ್ಟು ಪರಿಶ್ರಮಪಡಬೇಕಾಯಿತು. ಕೆಲವು ಸಂಬಂಧಿಕರು, ಸಂಘ - ಸಂಸ್ಥೆ ನೀಡಿದ ಒಂದಷ್ಟು ಪ್ರಾಯೋಜಕತ್ವ ದಿಂದ ಥಾಯ್ಲೆಂಡ್‍ಗೆ ತೆರಳಿದ್ದ ಈತ ಅಲ್ಲಿ ಉತ್ತಮ ಸಾಧನೆ ಮಾಡಿದ್ದು, ಮುಂದೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ನಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಮಟ್ಟದ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳಲು ಮತ್ತೆ ದಾನಿಗಳು-ಪ್ರಾಯೋಜಕರ ಅಗತ್ಯವಿದೆ.
- ಶಶಿ ಸೋಮಯ್ಯ