ಮಡಿಕೇರಿ, ಅ. 26: ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬೋಯಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸಾಯಿ ಟರ್ಫ್ ಹಾಕಿ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಬಾಲಕ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಮೈಸೂರು ತಂಡಗಳು ಪಾರಮ್ಯ ಮೆರೆದಿವೆ.

ಇಂದು ಒಟ್ಟು 10 ಪಂದ್ಯಾವಳಿಗಳು ನಡೆದಿದ್ದು, ಮೊದಲ ಪಂದ್ಯದಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕಲಬುರ್ಗಿ ತಂಡ ಬೆಳಗಾವಿ ತಂಡವನ್ನು ಭರ್ಜರಿ 21-0 ಗೋಲಿನಿಂದ ಸೋಲಿಸಿದೆ. ಮೈಸೂರು ತಂಡವು ಬೆಂಗಳೂರು ತಂಡವನ್ನು 7-2 ಗೋಲಿನಿಂದ ಸೋಲಿಸಿತು. ಮೈಸೂರಿನ ಆಕಾಶ್ ಬಿದ್ದಪ್ಪ 3 ಗೋಲು ಬಾರಿಸಿ ಗಮನ ಸೆಳೆದನು. ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡ ಕಲಬುರ್ಗಿ ತಂಡವನ್ನು 8-1 ಗೋಲಿನಿಂದ ಸೋಲಿಸಿತು. ಬೆಳಗಾವಿಯ ಶ್ರುತಿ ಹುಗ್ಗೇನವರ್ 5 ಗೋಲು ಬಾರಿಸಿದರು. ಮೈಸೂರು ತಂಡವು ಬೆಂಗಳೂರು ತಂಡವನ್ನು 7-0 ಗೋಲಿನಿಂದ ಸೋಲಿಸಿತು. ಮೈಸೂರಿನ ಸೌಮ್ಯ 3 ಗೋಲು ಬಾರಿಸಿದಳು.

17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕೂಡಿಗೆ ಕ್ರೀಡಾಶಾಲೆ ತಂಡವು ಬೆಂಗಳೂರು ತಂಡವನ್ನು 12-0 ಗೋಲುಗಳ ಭಾರೀ ಅಂತರದಿಂದ ಸೋಲಿಸಿತು. ಕೂಡಿಗೆಯ ನಿಶ್ಚಿತ ಹಾಗೂ ಈರಮ್ಮ ತಲಾ 4 ಗೋಲು ಬಾರಿಸಿದರು. ಕಲಬುರ್ಗಿ ತಂಡ 7-1 ಗೋಲಿನಿಂದ ಬೆಳಗಾವಿ ತಂಡವನ್ನು ಮಣಿಸಿತು. ಮೈಸೂರು ತಂಡ ಕೂಡಿಗೆ ಕ್ರೀಡಾಶಾಲೆ ತಂಡವನ್ನು 3-0 ಗೋಲಿನಿಂದ ಮಣಿಸಿತು.

ಬಾಲಕರ ವಿಭಾಗದಲ್ಲಿ ಕಲಬುರ್ಗಿ ತಂಡ ಬೆಳಗಾವಿ ತಂಡವನ್ನು 7-0 ಗೋಲಿನಿಂದ ಸೋಲಿಸಿತು. ಕೂಡಿಗೆ ಕ್ರೀಡಾಶಾಲೆ ತಂಡ ಬೆಂಗಳೂರು ತಂಡವನ್ನು 13-0 ಗೋಲುಗಳ ಅಂತರದಿಂದ ಸೋಲಿಸಿತು. ಮೈಸೂರು ತಂಡ ಇಂಡಿಯನ್ ಹೈಸ್ಕೂಲ್ ಬೆಂಗಳೂರು ತಂಡವನ್ನು 6-2 ಗೋಲಿನಿಂದ ಸೋಲಿಸಿತು. ಮೈಸೂರಿನ ಬಿಪಿನ್ 3 ಗೋಲು ಬಾರಿಸಿದರು.