ಮಡಿಕೇರಿ, ಅ. 26: ನೆಲಜಿ ಫಾರ್ಮರ್ಸ್ ಡೆವಲಪ್ಮೆಂಟ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ನ. 1 ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ರಾಜ್ಯಮಟ್ಟದ ಮುಕ್ತ ಸ್ಪರ್ಧೆ ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ ತಾಮರ ರೆಸಾರ್ಟ್ ಪ್ರಾಯೋಜಕತ್ವದಲ್ಲಿ ಮತ್ತು ದಾನಿಗಳ ನೆರವಿನಿಂದ ಅಂದು ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಲಿರುವ ಸ್ಪರ್ಧೆಯಲ್ಲಿ ಮಹಿಳೆಯರು ಮತ್ತು ಪುರುಷರು ಮುಕ್ತವಾಗಿ ಭಾಗವಹಿಸಬಹುದಾಗಿದ್ದು, .22 (ಪಾಯಿಂಟ್ 22) ಕೋವಿಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಇದಾಗಿದೆ ಎಂದು ಮಾಹಿತಿ ನೀಡಿದರು.
ಪುರುಷ ಮತ್ತು ಮಹಿಳೆಯರಿಗೆ ಮುಕ್ತವಾಗಿ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿಯೂ ಸ್ಪರ್ಧೆಗಳು ನಡೆಯಲಿದ್ದು, ಪುರುಷ ಮತ್ತು ಮಹಿಳೆಯರ ಮುಕ್ತ ಸ್ಪರ್ಧೆಯಲ್ಲಿ ಜಯಗಳಿಸುವ ಸ್ಪರ್ಧಿಗಳಿಗೆ ರೂ. 50 ಸಾವಿರ (ಪ್ರಥಮ), ರೂ. 30 ಸಾವಿರ (ದ್ವಿತೀಯ) ಹಾಗೂ ರೂ. 20 ಸಾವಿರ (ತೃತೀಯ) ಬಹುಮಾನ ನೀಡಲಾಗುವದಲ್ಲದೆ, ಮಹಿಳೆಯರ ಪ್ರತ್ಯೇಕ ಸ್ಪರ್ಧೆಯ ವಿಜೇತರಿಗೆ ರೂ. 5 ಸಾವಿರ (ಪ್ರಥಮ), ರೂ. 3 ಸಾವಿರ (ದ್ವಿತೀಯ) ಹಾಗೂ ರೂ. 2 ಸಾವಿರ (ತೃತೀಯ) ಬಹುಮಾನ ನೀಡಲಾಗುವದು ಎಂದು ವಿವರಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ನ. 1 ರ ಬೆಳಿಗ್ಗೆ 10.30ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಹೆಚ್ಚಿನ ಮಾಹಿತಿಗೆ 9480616746, 9741936212 ಸಂಪರ್ಕಿಸಬಹುದೆಂದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮಂಡೀರ ಸಚಿನ್, ಪದಾಧಿಕಾರಿಗಳಾದ ಬದ್ದಂಜೆಟ್ಟಿರ ತಿಮ್ಮಯ್ಯ, ಮಾಳೆಯಡ ವಿಜು ಅಪ್ಪಯ್ಯ, ಚಿಯಕಪೂವಂಡ ಎಂ. ಅಪ್ಪಯ್ಯ ಉಪಸ್ಥಿತರಿದ್ದರು.