ಗೋಣಿಕೊಪ್ಪ ವರದಿ, ಅ. 26: ಮನೆ ಬಳಕೆಗೆ ಬೇಕಾದಷ್ಟು ಜೇನು ಉತ್ಪಾದನೆಗೆ ಕೃಷಿಕರು ಮುಂದಾಗ ಬೇಕು ಎಂದು ಅಗ್ರಿಕಲ್ಚರಲ್ ಸೈನ್ಸಸ್ ಫೊರಂ ಆಫ್ ಕೊಡಗು ಅಧ್ಯಕ್ಷ ಪಿ.ಎಸ್. ಸುಬ್ರಮಣಿ ಸಲಹೆ ನೀಡಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಅಗ್ರಿಕಲ್ಚರಲ್ ಸೈನ್ಸಸ್ ಫೋರಂ ಆಫ್ ಕೊಡಗು ಮತ್ತು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಒಂದು ದಿನದ ಜೇನು ಕೃಷಿಕರ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಜೇನು ಹಿಂದಿನ ಕಾಲದಿಂದಲೂ ಕುಟುಂಬದಲ್ಲಿ ಆಹಾರ ಉತ್ಪನ್ನವಾಗಿ ಬಳಕೆಯಾಗು ತ್ತಿತ್ತು. ಪೋಷಕಾಂಶ ಮತ್ತು ಔಷಧೀಯ ಗುಣ ಹೊಂದಿರುವದ ರಿಂದ ಹೆಚ್ಚು ಸಹಕಾರಿ ಎಂಬದನ್ನು ಅರಿತುಕೊಂಡು ಕುಟುಂಬ ಬಳಕೆಗೆ ಜೇನು ಕೃಷಿಗೆ ಮುಂದಾಗಬೇಕು ಎಂದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರಬಾರ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೇನು ಹುಳಗಳ ಸಾಕಾಣಿಕೆ ಹೆಚ್ಚಾಗಬೇಕಿದೆ. ಸ್ಥಳೀಯವಾಗಿ ಜೇನು ಉತ್ಪಾದನೆ ಮೂಲಕ ಕಲಬೆರಕೆ ಜೇನುಗಳ ನಿಯಂತ್ರಣಕ್ಕೆ ಸ್ಥಳೀಯ ಕೃಷಿಕರು ಮುಂದಾಗಬೇಕು ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಡಾ. ಮೋಸೆಸ್ ಸಿಂಗ್ ಮಾತನಾಡಿ, ಸ್ವ ಉದ್ಯೋಗ ಸಂಘಗಳ ಮೂಲಕ ಜೇನು ಕೃಷಿ ಉದ್ಯಮಕ್ಕೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಯೋಜನೆಗಳಿದ್ದು, ಇದರ ಸದುಪಯೋಗ ಪಡೆಸಿಕೊಳ್ಳಬೇಕಿದೆ. ಶೇ. 35ರಷ್ಟು ಸಹಾಯಧನದಲ್ಲಿ ಸಂಘಗಳಿಗೆ ಸುಮಾರು 25 ಲಕ್ಷದ ವರೆಗೂ ಸಾಲ ಸೌಲಭ್ಯ ದೊರೆಯ ಲಿದೆ. ಇದರಿಂದ ಸ್ಥಳೀಯವಾಗಿಯೂ ಜೇನು ಕೃಷಿಗೆ ಉತ್ತೇಜನ ನೀಡಿದಂತಾಗಲಿದೆ ಎಂದರು. ಈ ಸಂದರ್ಭ ಜೇನು ಕೃಷಿ ಪ್ರಸ್ತುತತೆ ಮತ್ತು ಸವಾಲುಗಳ ಬಗ್ಗೆ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಜೇನು ಕೃಷಿ ವಿಭಾಗದ ವಿಜ್ಞಾನಿ ಡಾ. ಆರ್.ಎನ್. ಕೆಂಚರೆಡ್ಡಿ ಸಲಹೆ ನೀಡಿದರು.

ಜೇನು ನೊಣಗಳ ಆಹಾರ ಮೂಲ ವಿಚಾರವಾಗಿ ಡಾ. ರಾಮಕೃಷ್ಣ ಹೆಗ್ಡೆ ಮಾಹಿತಿ ನೀಡಿದರು. ಶಿಬಿರಾರ್ಥಿಗಳಿಗೆ ಮಧುವನ ಭೇಟಿ ಕಾರ್ಯಕ್ರಮ ನಡೆಯಿತು. ಪೆಟ್ಟಿಗೆ ಬಳಕೆ, ನಿರ್ವಹಣೆ ಬಗ್ಗೆ ಸಲಹೆ ನೀಡಲಾಯಿತು. ಪುತ್ತಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ಗಣೇಶ್ ಪ್ರಸಾದ್ ವಂದಿಸಿದರು.

- ಸುದ್ದಿಮನೆ