ಮಡಿಕೇರಿ, ಅ. 25: ಕರ್ನಾಟಕ ಪಂಚಾಯತ್‍ರಾಜ್ ವ್ಯವಸ್ಥೆಯಡಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿಗಳು ಮುಕ್ತ ವಾತಾವರಣದಲ್ಲಿ ತಮ್ಮ ತಮ್ಮ ಕೆಲಸಗಳನ್ನು ನಿರ್ವಹಿಸುವ ದಿಸೆಯಲ್ಲಿ ಸರಕಾರ ಗಮನ ನೀಡಲಿದೆ ಎಂದು; ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಘೋಷಿಸಿದರು.ಇಲ್ಲಿನ ಕೆ. ಬಾಡಗದಲ್ಲಿ ನೂತನ ಜಿ.ಪಂ. ಭವನ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ಕಲ್ಪಿಸಲು ಆಯ ಜಿಲ್ಲೆಗಳ ಜಿ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗುವದು ಎಂದು ನುಡಿದರು.ಈಚೆಗೆ ಬೆಳಗಾವಿ ಸುವರ್ಣ ಸೌಧದಲ್ಲಿ ರಾಜ್ಯದ ಎಲ್ಲಾ ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯಾಗಾರ ನಡೆಸಿದ್ದು, ಆ ವೇಳೆ ಜನಪ್ರತಿನಿಧಿಗಳು ಬಹುತೇಕ ಜಿಲ್ಲೆಗಳ ಶಾಸಕರು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳದ ಬಗ್ಗೆ ದೂರಿದ್ದಾಗಿ ತಿಳಿಸುತ್ತಾ; ಕೊಡಗಿನಲ್ಲಿ ಉತ್ತಮ ಬಾಂಧವ್ಯ ಇದೆ ಎಂದು ಶ್ಲಾಘಿಸಿದರು.ದೇಗುಲವಾಗಲಿ : ನೂತನ ಜಿ.ಪಂ. ಕಟ್ಟಡ ಅತ್ಯುತ್ತಮವಾಗಿದ್ದು; ಕೊಡಗಿನ ನೊಂದ ಜನತೆಗೆ ಸಾಂತ್ವನದ ದೇಗುಲವಾಗಲಿ ಎಂದು ಆಶಿಸಿದ ಈಶ್ವರಪ್ಪ, ಜಿಲ್ಲೆಯ ಗ್ರಾಮೀಣ ರಸ್ತೆಗಳು, ಕುಡಿಯುವ ನೀರು, ಕನಿಷ್ಟ ಮೂಲಭೂತ ಸೌಕರ್ಯಗಳೊಂದಿಗೆ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಪುನರ್ವಸತಿ ಸಹಿತ, ಬೆಳೆಹಾನಿ ಪರಿಹಾರಕ್ಕೆ ಹಣದ ಕೊರತೆಯಿಲ್ಲದಂತೆ ಸರಕಾರ ಎಲ್ಲಾ ಸಹಾಯ ನೀಡಲಿದೆ ಎಂದು ಭರವಸೆ ನೀಡಿದರು.

ಆರ್ಥಿಕ ನೆರವು : ಕೊಡಗು ಜಿಲ್ಲೆಯ ಗ್ರಾಮೀಣ ಕೆರೆಗಳ ಪುನಶ್ಚೇತನಕ್ಕೆ ರೂ. 1.8 ಕೋಟಿ, ಎರಡು ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ತಲಾ ರೂ. 10 ಕೋಟಿ, ಪ್ರಧಾನಮಂತ್ರಿ ಗ್ರಾಮ ಸಡಕ್

ರಸ್ತೆ ಯೋಜನೆಯಡಿ ಎರಡು ಕ್ಷೇತ್ರಗಳಿಗೆ ತಲಾ

(ಮೊದಲ ಪುಟದಿಂದ) ರೂ. 30 ಕೋಟಿ, ಕುಡಿಯುವ ನೀರು ಇತ್ಯಾದಿ ಸೌಲಭ್ಯಕ್ಕೆ ಪ್ರತಿ ಗ್ರಾ.ಪಂ.ಗೆ ತಲಾ ರೂ. 20 ಲಕ್ಷ ಸಹಾಯಧನ ಕಲ್ಪಿಸುವದಾಗಿ ಸಚಿವರು ಪ್ರಕಟಿಸಿದರು.

ಅಲ್ಲದೆ ಕೇಂದ್ರ ಎನ್‍ಡಿಆರ್‍ಎಫ್ ನಿಯಮದಂತೆ ಗ್ರಾಮೀಣ ರಸ್ತೆ ಅಭಿವೃದ್ಧಿ ಸೇರಿದಂತೆ; ಕಾಫಿ ಮತ್ತು ಕೃಷಿ ಹಾನಿಗೆ ಅಗತ್ಯ ಪರಿಹಾರವನ್ನು ನಷ್ಟಕ್ಕೊಳಗಾಗಿರುವ ರೈತರ ಖಾತೆಗಳಿಗೆ ಒದಗಿಸಲಾಗುತ್ತಿದೆ ಎಂದು ಆಶ್ವಾಸನೆ ನೀಡಿದರು.

ಮುಖ್ಯಮಂತ್ರಿಗಳ ಸಮ್ಮುಖ ಚರ್ಚೆ: ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು, 2018ರ ಮಳೆಹಾನಿ ಸಂತ್ರಸ್ತರ 35 ಕುಟುಂಬಗಳಿಗೆ ಕರ್ಣಂಗೇರಿಯಲ್ಲಿ ಮನೆಯ ಕೀಲಿಕೈ ಹಾಗೂ ಹಕ್ಕುಪತ್ರವನ್ನು ಸಮಾರಂಭದಲ್ಲಿ ವಿತರಿಸಿ ಮಾತನಾಡಿದರು. ಮಳೆಗಾಲ ಕಳೆದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಜಿಲ್ಲೆಗೆ ಕರೆತಂದು; ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸುವದಾಗಿಯೂ ಅವರು ಭರವಸೆ ನೀಡಿದರು.

ಮಾರ್ಚ್‍ಗೆ ಎಲ್ಲರಿಗೆ ಮನೆ : ಕೊಡಗು ಜಿಲ್ಲೆಯಲ್ಲಿ ಕಳೆದ 2 ವರ್ಷಗಳಲ್ಲಿ ತೊಂದರೆಗೆ ಒಳಗಾಗಿರುವ ಎಲ್ಲರಿಗೆ; ಜಿಲ್ಲಾಡಳಿತದ ಶಿಫಾರಸ್ಸು ಮೇರೆಗೆ ಮುಂದಿನ ಮಾರ್ಚ್ ಅಂತ್ಯದೊಳಗೆ ಮನೆಗಳನ್ನು ಕಟ್ಟಿಕೊಡಲಾಗುವದು ಎಂದು ಆಶ್ವಾಸನೆ ನೀಡಿದರಲ್ಲದೆ; ಈಗಾಗಲೇ ಕೊಡಗಿನ ಸಂತ್ರಸ್ತರಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತುರ್ತು ಪರಿಹಾರ ಒದಗಿಸಲಾಗಿದೆ ಎಂದು ಅಂಕಿ ಅಂಶ ನೀಡಿದರು.

ಕೊಡಗಿಗೆ ಕಲಶಪ್ರಾಯ: ನೂತನವಾಗಿ ನಿರ್ಮಾಣಗೊಂಡಿರುವ ಜಿಲ್ಲಾ ಪಂಚಾಯತ್ ಆಡಳಿತ ಭವನವು; ಕೊಡಗಿನ ಕಲಶಪ್ರಾಯ ದೊಂದಿಗೆ ಮುಕುಟಮಣಿಯಂತೆ ರೂಪುಗೊಂಡಿದೆ ಎಂದು ಕೊಂಡಾಡಿದ ಸಚಿವ ಸೋಮಣ್ಣ, ಕಾವೇರಿ ತವರು ಕೊಡಗಿಗೆ ಸರಕಾರದಿಂದ ಎಲ್ಲ ರೀತಿ ನೆರವು ಕಲ್ಪಿಸಿಕೊಡುವದಾಗಿ ಘೋಷಿಸಿದರು.

ಬೇಕು ಬೇಡಿಕೆ : ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಧ್ಯಕ್ಷತೆ ವಹಿಸಿ ಮಾತನಾಡಿದರೆ, ಇನ್ನೋರ್ವ ಶಾಸಕ ಕೆ.ಜಿ. ಬೋಪಯ್ಯ, ಮೇಲ್ಮನೆ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಇವರೆಲ್ಲರೂ ಮಾತನಾಡಿ; ಕೊಡಗಿನ ಸಮಗ್ರ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಿದರು. ಆ ದಿಸೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನ ಸೆಳೆದು ಬೇಡಿಕೆಗಳನ್ನು ಈಡೇರಿಸಲಾಗುವದು ಎಂದು ಸಚಿವದ್ವಯರು ಆಶ್ವಾಸನೆ ನೀಡಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ವಾಗತಿಸಿದರೆ; ಸಂತ ಮೈಕಲರ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಕೆ.ನಿಡುಗಣೆ ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮೊದಲಾದವರು ಉಪಸ್ಥಿತರಿದ್ದರು. ಆಕಾಶವಾಣಿ ಉದ್ಘೋಷಕ ಮಾದೇಟಿರ ಬೆಳ್ಯಪ್ಪ ನಿರೂಪಿಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಿ.ವಿ. ಸ್ನೇಹ ವಂದಿಸಿದರು.