ಮಡಿಕೇರಿ, ಅ. 25 : ಕೇಂದ್ರ ಹಾಗೂ ರಾಜ್ಯ ಸರಕಾರ ಕೊಡಗಿನ ನೆರೆ ಸಂತ್ರಸ್ತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಮಹಿಳಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ಮಹಿಳಾ ಘಟಕದ ಜಿಲ್ಲಾಧ್ಯಕೆÀ್ಷ ಶಾಂತಿ ಅಪ್ಪಚ್ಚು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜನ ತತ್ತರಿಸಿ ಹೋಗಿದ್ದಾರೆ. ಸಂತ್ರಸ್ತರು ಶಾಶ್ವತ ಪರಿಹಾರ ದೊರೆಯದೆ ಅತಂತ್ರ ಸ್ಥಿತಿಯಲ್ಲಿ ದಿನ ದೂಡುತ್ತಿದ್ದರೂ ಸರಕಾರ ಮಾತ್ರ ನೊಂದವರ ನೋವಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.

ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಮಳೆಹಾನಿ ಸಂಭವಿಸಿದಾಗ ಕೊಡಗಿಗೆ ಏಳು ಬಾರಿ ಆಗಮಿಸಿ ಜನರ ಸಂಕಷ್ಟಗಳನ್ನು ಆಲಿಸಿದ್ದಾರೆ. ಮನೆ ಕಳೆದುಕೊಂಡವರಿಗೆ ತುರ್ತಾಗಿ ರೂ. ಒಂದು ಲಕ್ಷ, ಬೆಲೆ ಬಾಳುವ ಮನೆಯ ಸಾಮಗ್ರಿಗಳನ್ನು ಕಳೆದುಕೊಂಡವರಿಗೆ ರೂ. 50 ಸಾವಿರ ಹಾಗೂ ಭಾಗಶಃ ಹಾನಿಗೊಳಗಾದವರಿಗೆ ರೂ. 25, 30 ಮತ್ತು ರೂ. 40 ಸಾವಿರ ಪರಿಹಾರ ನೀಡಿದ್ದರು. ಸಂತ್ರಸ್ತರು ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದುಕೊಳ್ಳಲು ಪ್ರತಿ ತಿಂಗಳು ತಲಾ ರೂ.10 ಸಾವಿರಗಳನ್ನು ಬಾಡಿಗೆ ರೂಪದಲ್ಲಿ ನೀಡುತ್ತಿದ್ದರು. ಅಲ್ಲದೆ ನೂತನ ಮನೆಗಳ ನಿರ್ಮಾಣಕ್ಕೆ ತಲಾ ಹತ್ತು ಲಕ್ಷ ರೂ.ಗಳನ್ನು ನೀಡಲಾಗಿದೆ.

ಆದರೆ ಇಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸಂತ್ರಸ್ತರಿಗೆ ಕಳೆದ ಮೂರು, ನಾಲ್ಕು ತಿಂಗಳಿನಿಂದ ಮನೆ ಬಾಡಿಗೆ ಹಣವನ್ನೇ ನೀಡಿಲ್ಲವೆಂದು ಶಾಂತಿ ಅಪ್ಪಚ್ಚು ಆರೋಪಿಸಿದರು. ಹಿಂದಿನ ಮೈತ್ರಿ ಸರಕಾರ ಬಿಡುಗಡೆ ಮಾಡಿದ ರೀತಿಯಲ್ಲೇ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದರು.

ಕಾಫಿ, ಕರಿಮೆಣಸು ಸೇರಿದಂತೆ ವಿವಿಧ ಬೆಳೆಗಳು ಮಹಾಮಳೆಯಿಂದ ನಾಶವಾಗಿದೆ, ವ್ಯಾಪಾರೋದ್ಯಮಿಗಳಿಗೆ ಮತ್ತು ಪ್ರವಾಸೋದ್ಯಮಿಗಳಿಗೆ ವ್ಯವಹಾರವಿಲ್ಲದೆ ಜೀವನ ನಡೆಸುವದೇ ಕಷ್ಟ ಎಂಬಂತಾಗಿದೆ. ಪರಿಸ್ಥಿತಿ ಇಷ್ಟು ಹದಗೆಟ್ಟಿದ್ದರೂ ಸ್ಥಳೀಯ ಸಂಸ್ಥೆಗಳ ಮೂಲಕ ಸರಕಾರ ದುಬಾರಿ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಟೀಕಿಸಿದರು.

ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ ಮಾತನಾಡಿ, ಸಂತ್ರಸ್ತರು ಆಶ್ರಯ ಪಡೆದಿರುವ ಮನೆಗಳ ಬಾಡಿಗೆ ಹಣವನ್ನು 10 ಸಾವಿರದಿಂದ 5 ಸಾವಿರಕ್ಕೆ ಕಡಿತಗೊಳಿಸಿರುವದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದಾದರೂ ತಲಾ ರೂ. 10 ಸಕಾಲದಲ್ಲಿ ಬಾಡಿಗೆ ಹಣವನ್ನು ಸಂತ್ರಸ್ತರ ಖಾತೆಗೆ ಹಾಕಬೇಕು ಮತ್ತು ನೂತನ ಮನೆಗಳನ್ನು ಶೀಘ್ರ ಹಸ್ತಾಂತರಿಸಬೇಕು. ತಪ್ಪಿದಲ್ಲಿ ಜೆಡಿಎಸ್ ವತಿಯಿಂದ ಹೋರಾಟವನ್ನು ತೀವ್ರಗೊಳಿಸುವದಾಗಿ ಎಚ್ಚರಿಕೆ ನೀಡಿದರು.

ಜೆಡಿಎಸ್ ಮಹಿಳಾ ಕಾರ್ಯದರ್ಶಿ ಕುಸುಮಾ ಚಂದ್ರಶೇಖರ್, ನಗರಾಧ್ಯಕೆÀ್ಷ ಸುನಂದ, ಪ್ರಧಾನ ಕಾರ್ಯದರ್ಶಿ ಜೆಸ್ಸಿಂತಾ ಶ್ರೀಧರ್, ಖಜಾಂಚಿ ಡೆನ್ನಿ ಬರೋಸ್, ಮಡಿಕೇರಿ ಪರಿಶಿಷ್ಟ ಜಾತಿ, ಪಂಗಡದ ಅಧ್ಯಕೆÀ್ಷ ಲತಾ ದೇವರಾಜ್, ಪೆÇನ್ನಂಪೇಟೆ ಹೋಬಳಿ ಅಧ್ಯಕ್ಷೆ ಹೆಚ್.ಎನ್.ಮಂಜುಳಾ ನಾಗು, ಪ್ರಧಾನ ಕಾರ್ಯದರ್ಶಿ ಆದಿಲ್ ಪಾಷ, ಸುನೀಲ್, ರಾಜ್ಯ ಕಾರ್ಯದರ್ಶಿ ಪಿ.ಎ.ಯೂಸೂಫ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹ ಅವರಿಗೆ ಸಲ್ಲಿಸಿದರು. ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ಮರು ಪಾವತಿಗೆ ಒತ್ತಡ ಹೇರುತ್ತಿದ್ದು, ಕಿರುಕುಳ ನೀಡುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇದೇ ಸಂದರ್ಭ ಜೆಡಿಎಸ್ ಪ್ರಮುಖರು ಒತ್ತಾಯಿಸಿದರು.