ಪಾಲಿಬೆಟ್ಟ, ಅ. 25: ಐವತ್ತು ಅಡಿ ಆಳದ ಕಲ್ಲು ಕೋರೆಯ ನೀರಿನ ಹೊಂಡಕ್ಕೆ ಕಾಲು ಜಾರಿ ಬಿದ್ದ ವ್ಯಕ್ತಿಯೋರ್ವನನ್ನು 15 ಗಂಟೆಗಳ ನಂತರ ಹರಸಾಹಸ ಪಟ್ಟು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಪಾಲಿಬೆಟ್ಟ ಹೊಸೂರು ಗ್ರಾಮದ ಮಂಜುನಾಥ್ ಎಂಬವರನ್ನು ಪ್ರಾಣಾಪ್ರಾಯದಿಂದ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ ಹೊಸೂರು ಗ್ರಾಮದಲ್ಲಿರುವ ಮನೆಗೆ ಕಲ್ಲುಕೋರೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಂಜುನಾಥ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸುಮಾರು ಐವತ್ತು ಅಡಿ ಆಳದ ಕಲ್ಲು ಕೋರೆಯ ನೀರಿನ ಹೊಂಡ ದಲ್ಲಿ ಸಿಲುಕಿಕೊಂಡು ಮೇಲೆ ಬರಲು ಸಾಧ್ಯವಾಗದೆ ಗಿಡಗಂಟಿಗಳ ಮಧ್ಯೆ ಸಿಲುಕಿಕೊಂಡು ರಾತ್ರಿಯಿಡೀ ದಿನ ಕಳೆದಿದ್ದಾನೆ.
ಬೆಳಿಗ್ಗೆ ವ್ಯಕ್ತಿಯ ಕಿರುಚಾಟದ ಶಬ್ದ ಕೇಳಿದ ಸ್ಥಳೀಯರು ನೀರಿನಲ್ಲಿ ಬಿದ್ದ ವ್ಯಕ್ತಿಯನ್ನ ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಹಗ್ಗದಿಂದ ಮೇಲೆತ್ತಲು ಹರಸಾಹಸ ಪಟ್ಟರೂ ಸಾಧ್ಯವಾಗದ ಪರಿಸ್ಥಿತಿ ಇತ್ತು ಈ ಹಿನ್ನೆಲೆಯಲ್ಲಿ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಿ ಚಿಣ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಗೋಣಿಕೊಪ್ಪದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು ತಕ್ಷಣ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಸುಮಾರು ಒಂದು ಗಂಟೆ ಕಾಲ ಹರಸಾಹಸ ಪಟ್ಟು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದು; ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ಕಾಳಪ್ಪ ಸಿಬ್ಬಂದಿಗಳಾದ ಕಿರಣ್, ಮಂಜು, ಪಾಟೀಲ್, ಚಾವಣ್ ಅವರ ಸಾಹಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹ ಪಾಲಿಬೆಟ್ಟ ಉಪ ಠಾಣೆಯ ಗಣೇಶ್ ಸೇರಿದಂತೆ ಮತ್ತಿತರರಿದ್ದರು.
- ಪುತ್ತಂ ಪ್ರದೀಪ್